ಪುತ್ತೂರು: ಪರ್ಲಡ್ಕ ಮತಗಟ್ಟೆಯಲ್ಲಿ ಪ್ರಾಯೋಗಿಕ ಮತದಾನದ ವೇಳೆ ದೋಷ, ಲಿಖಿತ ಆಕ್ಷೇಪಣೆ

Update: 2018-08-31 17:48 GMT

ಪುತ್ತೂರು, ಆ. 31: ನಗರಸಭಾ ಚುನಾವಣೆಯ 31 ವಾರ್ಡ್‍ಗಳಿಗೆ ಶುಕ್ರವಾರ ನಡೆದ ಚುನಾವಣೆಯು ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ನಡೆದಿದೆ. ಬೆಳಗ್ಗಿನ ವೇಳೆಯಲ್ಲಿ ಬಿರುಸಿನ ಮತದಾನವಾಗಿದ್ದು, ಮದ್ಯಾಹ್ನದ ವೇಳೆಯಲ್ಲಿ ನೀರಸವಾಗಿತ್ತು. ಸಂಜೆ ವೇಳೆಗೆ ಮತ್ತೆ ಬಿರುಸಿನ ಮತದಾನ ನಡೆಯಿತು.

ಮತದಾನ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತು ನಡೆಸಲಾಗಿತ್ತು. ನಗರದ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಎಲ್ಲಾ ಮತಕೇಂದ್ರಗಳ ಬಳಿಯಲ್ಲಿ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ತಮ್ಮ ಪರವಾಗಿ ಮತ ಚಲಾಯಿಸುವಂತೆ ಮತದಾರರನ್ನು ಓಲೈಸುತ್ತಿರುವ ದೃಶ್ಯ ಕಂಡು ಬರುತ್ತಿತ್ತು. ಪರ್ಲಡ್ಕ ಶಾಲೆಯಲ್ಲಿರುವ ವಾರ್ಡ್ ಸಂಖ್ಯೆ 19ರಲ್ಲಿ ಪ್ರಾಯೋಗಿಕ ಮತ ಚಲಾವಣೆಯ ವೇಳೆಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಕಾರಣ ಗೊಂದಲ ನಿರ್ಮಾಣಗೊಂಡಿದ್ದರೂ ಬಳಿಕ ಯಶಸ್ವಿಯಾಗಿ ಮತದಾನ ಪ್ರಕ್ರಿಯೆ ನಡೆಯಿತು. ನಗರದ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ 27 ಸೂಕ್ಷ್ಮ ಮತ್ತು 14 ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಪಟ್ಟು 41 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 

ಪ್ರಾಯೋಗಿಕ ಮತದಾನದ ವೇಳೆಯಲ್ಲಿ ದೋಷ; ಕಾಂಗ್ರೆಸ್‍ನಿಂದ ಚುನಾವಣಾಧಿಕಾರಿಗಳಿಗೆ ಲಿಖಿತ ಆಕ್ಷೇಪಣೆ:

 ಪ್ರಾಯೋಗಿಕ ಮತದಾನದ ವೇಳೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ಮೂರು ಬಾರಿ ಪ್ರಾಯೋಗಿಕ ಮತದಾನ ನಡೆಸಿದ ಘಟನೆ ವಾರ್ಡ್ 19ರ ಬೂತ್ ಸಂಖ್ಯೆ 27ರಲ್ಲಿ ನಡೆದಿದ್ದು, ಈ ಬಗ್ಗೆ ಕಾಂಗ್ರೆಸ್ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ನೀಡಿ ಆಕ್ಷೇಪಣೆ ವ್ಯಕ್ತ ಪಡಿಸಿದೆ. 

ಪರ್ಲಡ್ಕ ಹಿರಿಯ ಪ್ರಾಥಮಿಕ ಪೂರ್ವ ಭಾಗದ ಮತಗಟ್ಟೆಯಲ್ಲಿ ವಾರ್ಡ್ 19ರ ಮತದಾನ ನಡೆಯಿತು. ಚುನಾವಣಾ ಏಜೆಂಟರುಗಳು ಮಾದ್ಯಮಕ್ಕೆ ತಿಳಿಸಿದಂತೆ ಈ ಕೇಂದ್ರದಲ್ಲಿ ಬೆಳಗ್ಗೆ  ಪ್ರಾಯೋಗಿಕವಾಗಿ ಕಾಂಗ್ರೆಸ್ 16, ಬಿಜೆಪಿ 16 ಮತ್ತು 18 ನೋಟಾ ಮತ ಸೇರಿದಂತೆ  50 ಮತವನ್ನು ಚಲಾಯಿಸಲಾಯಿತು. ಈ ಮತವನ್ನು ಪರಿಶೀಲನೆ ನಡೆಸಿದಾಗ ಕಾಂಗ್ರೆಸ್‍ಗೆ 12, ಬಿಜೆಪಿಗೆ 17 ಮತ್ತು ನೋಟಾ 21 ಮತಗಳು ಚಲಾವಣೆಯಾಗಿತ್ತು. ಬಳಿಕ ಮತ್ತೊಮ್ಮೆ ಕಾಂಗ್ರೆಸ್ 3, ಬಿಜೆಪಿ 3 ಮತ್ತು ನೋಟಾ 4 ಸೇರಿದಂತೆ ಒಟ್ಟು 10 ಮತಗಳನ್ನು ಚಲಾಯಿಸಲಾಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‍ಗೆ 2, ಬಿಜೆಪಿಗೆ 3 ಮತ್ತು ನೋಟಾಕ್ಕೆ 5 ಮತಗಳು ಬಿದ್ದಿದ್ದವು. ಇದರಿಂದ ಸಾಕಷ್ಟು ಗೊಂದಲ ಉಂಟಾಗಿತ್ತು. ಮೂರನೇ ಬಾರಿಗೆ ಪಕ್ಷದ ಏಜೆಂಟ್‍ಗಳಿಗೆ ಅವಕಾಶ ನೀಡದೆ ಅಧಿಕಾರಿಗಳೇ 10 ಮತಗಳನ್ನು ಚಲಾಯಿಸಿದರು. ಈ ಮತಗಳು ಸರಿಯಾಗಿ ಚಲಾವಣೆಯಾಗಿತ್ತು. ಬಳಿಕ ಮತದಾನಕ್ಕೆ ಅವಕಾಶ ನೀಡಲಾಯಿತು. 

ಪ್ರಾಯೋಗಿಕ ಮತಚಲಾವಣೆಯ ಸಂದರ್ಭದಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಆ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಪುಷ್ಪಲತಾ ಅವರ ಪರ ಚುನಾವಣಾ ಏಜೆಂಟ್ ಆಗಿದ್ದ ತಿಲಕ್ ಭಂಡಾರಿ ಎಂಬವರು ಚುನಾವಣಾಧಿಕಾರಿಗಳಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ. 

ಪ್ರಾಯೋಗಿಕ ಮತದಾನದ ವೇಳೆ ಚಲಾಯಿಸಲಾದ 10 ಮತಗಳ ಪೈಕಿ 6 ಮತಗಳು ನೋಟಾಕ್ಕೆ ಪರಿವರ್ತನೆಗೊಂಡಿದ್ದು, ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನೀಡಿದ ಮತಗಳು ದಾಖಲಾಗಿರುವುದಿಲ್ಲ. ಈ ಮತ ಯಂತ್ರವು ದೋಷಪೂರಿತವಾಗಿರುವುದರಿಂದ ನಮ್ಮ ಆಕ್ಷೇಪಣೆ ಇದ್ದು, ಬದಲಿ ಮತಯಂತ್ರವನ್ನು ಸ್ಥಾಪಿಸಿ ನ್ಯಾಯಪರ ಚುನಾವಣೆ ನಡೆಸಬೇಕೆಂದು ತಿಲಕ್ ಭಂಡಾರಿ ಅವರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ತಿಳಿಸಿದ್ದಾರೆ. 

ಆರಂಭಿಕವಾಗಿ ನಡೆಸಲಾದ ಪ್ರಯೋಗಿಕ ಮತದಾನದ ವೇಳೆಯೂ ಅಭ್ಯರ್ಥಿಗಳಿಗೆ ಚಲಾಯಿಸಿ ಮತ ನೋಟಾಕ್ಕೆ ಪರಿವರ್ತನೆಯಾಗಿತ್ತು. ಎರಡನೇ ಬಾರಿಯ ಪ್ರಾಯೋಗಿಕ ಮತದಾನದ ವೇಳೆಯೂ ಇದೇ ದೋಷ ಪರಿವರ್ತನೆಯಾಗಿತ್ತು. ಮೂರನೇ ಬಾರಿಯ ಪ್ರಯೋಗಿಕ ಮತದಾನದ ವೇಳೆ ಸಮರ್ಪಕವಾಗಿತ್ತು.ಈ ಹಿನ್ನಲೆಯಲ್ಲಿ ಅಧಿಕಾರಿಗಳು ಅದೇ ಯಂತ್ರವನ್ನು ಬಳಸಿಕೊಂಡು ಮತದಾನ ಮುಂದುವರಿಸಿದರು. ಈ ಗೊಂದಲದಿಂದಾಗಿ ಮತದಾನ ಪ್ರಕ್ರಿಯೆಯಲ್ಲಿ ಕಾಲು ಗಂಟೆ ವಿಳಂಬವಾಗಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News