ಉಳ್ಳಾಲ ನಗರಸಭೆ ಚುನಾವಣೆ; ಶಾಂತಿಯುತ ಮತದಾನ

Update: 2018-08-31 17:51 GMT

ಉಳ್ಳಾಲ, ಆ. 31: ಉಳ್ಳಾಲ ನಗರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹೆಚ್ಚಿನ ಎಲ್ಲಾ ಮತಗಟ್ಟೆಗಳಲ್ಲಿಯೂ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಯಿತು. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 102 ಅಭ್ಯರ್ಥಿಗಳ ಭವಿಷ್ಯವು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ವಾರದ ನಡುವಿನ ದಿನವಾಗಿದ್ದರಿಂದ ಕೆಲಸಕ್ಕೆ ತೆರಳುವವರು ಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು. ಉಳ್ಳಾಲ ನಗರಸಭೆ ವ್ಯಾಪ್ತಿಯ ಒಟ್ಟು 43 ಮತಗಟ್ಟೆಗಳಲ್ಲಿ ಪೊಲೀಸರ ಬಿಗು ಬಂದೋಬಸ್ತ್ ನೊಂದಿಗೆ ಮತದಾನ ನಡೆದಿದ್ದು, 65.36 ಶೇಕಡ ಮತದಾನ ನಡೆದಿದೆ. ಮತಗಟ್ಟೆಗಳ ನೂರು ಮೀಟರ್ ಅಂತರದೊಳಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವೃದ್ಧರು, ಅಂಗವಿಕಲ ಮತದಾರರು ಸಂಚರಿಸುವ ವಾಹನಗಳಿಗೆ ಮಾತ್ರ ರಿಯಾಯಿತಿಯನ್ನು ನೀಡಲಾಗಿತ್ತು. 

ಚುನಾವಣೆಯಲ್ಲಿ ಒಟ್ಟು 31 ಕ್ಷೇತ್ರಗಳಿಗೆ ವಿವಿಧ ಪಕ್ಷಗಳ ಒಟ್ಟು 102 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಸೋಮವಾರದಂದು ನಡೆಯಲಿರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಲಿತಾಂಶ ಹೊರಬೀಳಲಿದೆ. 

ಪೊಲೀಸರೊಂದಿಗೆ ವಾಗ್ವಾದ: ಕಲ್ಲಾಪು ಪಟ್ಣ ಕ್ಷೇತ್ರದ ಅಭ್ಯರ್ಥಿಯೊರ್ವರು ಮತಗಟ್ಟೆಯ ಹತ್ತಿರವೇ ಮತಯಾಚನೆ ನಡೆಸುತ್ತಿರುವುದನ್ನು ಕಂಡ ಉಳ್ಳಾಲ ಸಬ್ ಇನ್‍ಸ್ಪೆಕ್ಟರ್ ಅವರು ಆಕ್ಷೇಪಿಸಿದ್ದು ಈ ಸಂದರ್ಭದಲ್ಲಿ ಸ್ವಲ್ಪ ಸಮಯ ವಾಗ್ವಾದ ಉಂಟಾಯಿತು. ಬಳಿಕ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಯಿತು. 

ನಗಾರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಉಳ್ಳಾಲ ಮಾಸ್ತಿಕಟ್ಟೆಯ ಮತಗಟ್ಟೆಯ ಬಳಿಯ ಕಾಂಗ್ರೆಸ್ ಪಕ್ಷದ ಬೂತಿನೊಳಗೆ ಕುಳಿತು ಕೆಲಕಾಲ ಕಾರ್ಯನಿರ್ವಹಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News