ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರ

Update: 2018-08-31 17:53 GMT

ಕಾಪು, ಆ. 31 : ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಸ್ಥಳಾಂತರದ ಪ್ರಯುಕ್ತ ಶುಕ್ರವಾರ ಜರಗಿದ ಪೂಜಾ ವಿಧಿ ವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಾಲಾಜಿ ಆರ್.ಮೆಂಡನ್, ಕಾಪುವಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಅವರು ಕಾಪುವನ್ನು ತಾಲ್ಲೂಕನ್ನಾಗಿ ಮಾರ್ಪಡಿಸುವಾಗ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ 1.30ಕೋ. ರೂ. ಅನುದಾನ ಇರಿಸಿದ್ದು, ಇದರಲ್ಲಿ ಆಸ್ಪತ್ರೆಗೆ ಕಟ್ಟಡ ನಿರ್ಮಾಣವಾಗಿದೆ. ಕಾಪು ತಾಲ್ಲೂಕು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೂಡಾ ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದರು.

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬಂದಿಗಳ ಕೊರತೆಯಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ಸರ್ಕಾರದ ಗಮನ ಸೆಳೆದು, ಸಿಬಂದಿ ಕೊರತೆ ನೀಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಮಾತನಾಡಿ,  ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಓರ್ವ ವೈದ್ಯರನ್ನು ನಿಯುಕ್ತಿ ಗೊಳಿಸಲಾಗಿದೆ.  ಪಡುಬಿದ್ರಿಯ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್ ಇಲ್ಲಿ ಸೇವೆಯಲ್ಲಿ ನಿರತರಾಗಿದ್ದು, ಆಸ್ಪತ್ರೆ ಮೇಲ್ದರ್ಜೆಗೇರುತ್ತಿದ್ದಂತೆಯೇ ಹಲವಾರು ಸೌಲಭ್ಯಗಳು ಇಲ್ಲಿನ ಜನರಿಗೆ ದೊರಲಿವೆ ಎಂದರು.

ಕಾಪು ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಉಸ್ಮಾನ್, ಪುರಸಭಾ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಡಾ. ನಾಗರತ್ನಾ, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜೇಶ್ ಶೆಟ್ಟಿ ಪಾಂಗಾಳ, ಶಶಿಪ್ರಭಾ ಶೆಟ್ಟಿ, ಡಾ. ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು. ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ. ಬಿ.ಬಿ. ರಾವ್ ಸ್ವಾಗತಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News