ನೆರೆ ಪರಿಹಾರಕ್ಕಾಗಿ ಯುಎಇಯ ನೆರವು ಪಡೆಯುವ ವಿಶ್ವಾಸ: ಪಿಣರಾಯಿ ವಿಜಯನ್

Update: 2018-09-01 14:18 GMT

ತಿರುವನಂತಪುರ,ಸೆ.1: ಕೇರಳದಲ್ಲಿ ನೆರೆ ಪರಿಹಾರಕ್ಕಾಗಿ ಯುಎಇಯ ಆರ್ಥಿಕ ನೆರವಿನ ಕೊಡುಗೆಯನ್ನು ಪಡೆಯುವ ವಿಶ್ವಾಸ ತನಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಇಲ್ಲಿ ಹೇಳಿದರು.

ಯುಎಇ ಮುಂದಿಟ್ಟಿತ್ತೆನ್ನಲಾದ 700 ಕೋ.ರೂ.ಗಳ ಆರ್ಥಿಕ ನೆರವಿನ ಕೊಡುಗೆಯನ್ನು ಸ್ವೀಕರಿಸಲು ಕೇಂದ್ರದ ನಿರಾಕರಣೆ ಕುರಿತು ವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

ನೆರೆಪೀಡಿತ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆಗಳ ಹೊಣೆ ಹೊತ್ತಿದ್ದ ಐಎಎಸ್ ಅಧಿಕಾರಿಗಳನ್ನು ಸನ್ಮಾನಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವಿಜಯನ್, ಹಲವಾರು ರಾಷ್ಟ್ರಗಳು ಕೇರಳಕ್ಕೆ ನೆರವಾಗಲು ಮುಂದೆ ಬಂದಿವೆ ಎಂದು ತಿಳಿಸಿದರು.

ಯುಎಇ ನೆರವನ್ನು ನಿರಾಕರಿಸಿರುವ ಕೇಂದ್ರದ ನಿಲುವು ಮುಂದುವರಿಯುತ್ತದೆ ಎಂದು ತಾನು ಭಾವಿಸಿಲ್ಲ ಎಂದ ಅವರು,ಪರಿಹಾರ ಕಾರ್ಯಾಚರಣೆಗಳಿಗಾಗಿ ನಿಧಿ ಸಂಗ್ರಹಕ್ಕೆ ದೇಶವಿದೇಶಗಳಿಂದ ಉತ್ತಮ ಬೆಂಬಲ ಸಿಗುತ್ತಿದೆ ಮತ್ತು ಇದನ್ನು ಸೂಕ್ತರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಗಳು ನಡೆಯಬೇಕಿವೆ ಎಂದರು.

ಪರಿಸ್ಥಿತಿಯನ್ನು ಎದುರಿಸಲು ಪರಿಹಾರದ ಜೊತೆಗೆ ವಿಶೇಷ ಪ್ಯಾಕೇಜ್ ನೀಡುವಂತೆಯೂ ರಾಜ್ಯವು ಕೇಂದ್ರವನ್ನು ಕೋರಿಕೊಂಡಿದೆ ಎಂದು ತಿಳಿಸಿದ ಅವರು,ರಾಜ್ಯವು ಅನುಭವಿಸಿರುವ ಹಾನಿಯನ್ನು ಸಂಪೂರ್ಣವಾಗಿ ತುಂಬಿಕೊಡಲು ಕೇಂದ್ರಕ್ಕೂ ಮಿತಿಗಳಿವೆ. ಹೀಗಾಗಿ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಾರ್ಯಗಳಿಗಾಗಿ ಕೊರತೆಯಾಗುವ ಹಣಕಾಸನ್ನು ಕ್ರೋಢೀಕರಿಸಲು ರಾಜ್ಯವು ಸಂಪನ್ಮೂಲಗಳನ್ನು ಕಂಡುಕೊಳ್ಳಬೇಕಿದೆ ಎಂದರು.

ರಾಜ್ಯದ ಪುನರ್‌ನಿರ್ಮಾಣಕ್ಕಾಗಿ ಕೆಪಿಎಂಜಿಯನ್ನು ಸಮಾಲೋಚನಾ ಪಾಲುದಾರನಾಗಿ ನೇಮಕಗೊಳಿಸುವ ಸಂಪುಟದ ನಿರ್ಧಾರವನ್ನು ಪ್ರಶಂಸಿಸಿದ ಅವರು,ಸಮಾಲೋಚನೆ ಒಂದೇ ಸಂಸ್ಥೆಗೆ ಸೀಮಿತವಲ್ಲ. ನಮಗೆ ಎಲ್ಲರ ನೆರವೂ ದೊರೆಯುವಂತೆ ನೋಡಿಕೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News