ಪ್ರವಾಹ ಪೀಡಿತ ಕೇರಳದಲ್ಲಿ ಇಲಿಜ್ವರಕ್ಕೆ 28 ಬಲಿ

Update: 2018-09-01 14:33 GMT

ತಿರುವನಂತಪುರ, ಸೆ. 1: ಪ್ರವಾಹ ಪೀಡಿತ ಕೇರಳದಲ್ಲಿ ಇಲಿ ಜ್ವರದಿಂದ ಒಂದು ತಿಂಗಳಲ್ಲಿ 28 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಘೋಷಿಸಿದೆ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯದಿಂದ ಹೆಚ್ಚಿನ ಔಷಧವನ್ನು ಕೋರಿದೆ. ನೆರೆ ಪೀಡಿತ ಪ್ರದೇಶದಲ್ಲಿ ಇಲಿ ಜ್ವರ ಹರಡುವ ಸಾಧ್ಯತೆ ಅತ್ಯಧಿಕ. ನೆರೆ ನೀರಲ್ಲಿ ಇಲಿ ಹಾಗೂ ಇತರ ಪ್ರಾಣಿಗಳ ಮೂತ್ರ ಬೆರೆತು ಇಲಿಜ್ವರ ಮಾನವನಿಗೆ ಸುಲಭವಾಗಿ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ವೃದ್ಧರು, ಮೂತ್ರಕೋಶದ ಹಾಗೂ ಯಕೃತ್ತಿನ ತೊಂದರೆಯಿಂದ ನರಳುತ್ತಿರುವವರು ಇದಕ್ಕೆ ಸುಲಭವಾಗಿ ಗುರಿಯಾಗುತ್ತಾರೆ. ತೀವ್ರ ಜ್ವರ, ತಲೆನೋವು, ಚಳಿ, ಹೊಟ್ಟೆನೋವು ಹಾಗೂ ದದ್ದುಗಳು ಇದರ ಲಕ್ಷಣ.

ಮೂವರು ಪರಿಹಾರ ಕಾರ್ಯಕರ್ತರು ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳಲ್ಲಿ 300 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೋಝಿಕೋಡ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ಇಲಿ ಜ್ವರದ ಬಗ್ಗೆ ಮುನ್ನೆಚ್ಚರಿಕೆಯನ್ನು ಆರೋಗ್ಯ ನಿರ್ದೇಶನಾಲಯ ನೀಡಿದೆ ಹಾಗೂ ಸ್ವ ಚಿಕಿತ್ಸೆ ಮಾಡಿಕೊಳ್ಳದಂತೆ ಜನರಿಗೆ ಸಲಹೆ ನೀಡಿದೆ.

ಕೋಝಿಕೋಡ್, ಪಾಲಕ್ಕಾಡ್, ತ್ರಿಶೂರ್, ಮಲಪ್ಪುರಂ ಹಾಗೂ ಎರ್ನಾಕುಲಂ ಜಿಲ್ಲೆಗಳಲ್ಲಿ ಶಂಕಿತ ಹಲವು ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 1ರಿಂದ 28 ಸಾವು ಸಂಭವಿಸಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News