×
Ad

ಶಂಕರ ಪೂಜಾರಿ ನಿರಪರಾಧಿ; ಬಿಡುಗಡೆಗೆ ನಾವೂ ಪ್ರಯತ್ನಿಸುತ್ತಿದ್ದೇವೆ -ಉಡುಪಿಯ ಮುಬಾರಕ್ ಅಲಿ ಸ್ಪಷ್ಟನೆ

Update: 2018-09-01 20:51 IST
ಶಂಕರ ಪೂಜಾರಿ

ಉಡುಪಿ, ಸೆ.1: ಊರಿನಿಂದ ಕುವೈತ್‌ಗೆ ಮರಳುವ ಸಂದರ್ಭದಲ್ಲಿ ಅಲ್ಲಿ ನಿಷೇಧಿತವಾಗಿರುವ, ಮಾದಕದ್ರವ್ಯದ ಅಂಶವನ್ನೊಳಗೊಂಡ ಔಷಧದ ಕಟ್ಟನ್ನು ಹೊಂದಿದ ಆರೋಪದ ಮೇಲೆ ಕುವೈತ್ ಪೊಲೀಸರಿಂದ ಬಂಧಿತರಾಗಿ ಅಲ್ಲಿ ಜೈಲಿನಲ್ಲಿರುವ ಕುಂದಾಪುರ ತಾಲೂಕು ಆನಗಳ್ಳಿ ಕಳಂಜೆಯ ಶಂಕರ ಪೂಜಾರಿ ಅವರ ಬಿಡುಗಡೆಗೆ ನಾವೂ ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಉಡುಪಿಯ ಮುಬಾರಕ್ ಅಲಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಬಾರಕ್ ಅಲಿ, ನನ್ನ ಅತ್ತೆಯವರಾದ ತಸ್ಲೀಮ್ ಫಾತಿಮಾರಿಗಾಗಿ ಕೆಎಂಸಿಯ ವೈದ್ಯರು ನೀಡಿದ ಔಷಧಿಯ ಚೀಟಿಯ ಆಧಾರದಲ್ಲಿ ಮೂರು ವಿಧದ ಮಾತ್ರೆಗಳನ್ನು ಶಂಕರ್ ಅವರೊಂದಿಗೆ ಕಳುಹಿಸಿರುವುದನ್ನು ಒಪ್ಪಿಕೊಂಡರು.

ಈ ಔಷಧದ ಚೀಟಿಯಲ್ಲಿ ವೈದ್ಯರು ಬರೆದ ಮಾತ್ರೆಗಳನ್ನು ನಗರದ ಮೆಡಿಕಲ್ ಶಾಪ್ ಒಂದರಿಂದ ಖರೀದಿಸಿ ಶಂಕರ ಪೂಜಾರಿ ಅವರ ಕೈಯಲ್ಲಿ ಕೊಟ್ಟಿದ್ದಲ್ಲದೇ, ಅದರೊಂದಿಗೆ ಮನೆಯಲ್ಲಿ ಮಾಡಿದ ಸಿಹಿತಿಂಡಿಯನ್ನು ಸಹ ಕಳುಹಿಸಿಕೊಟ್ಟಿರುವುದಾಗಿ ಅವರು ಹೇಳಿದರು.

ಮಾತ್ರೆಯೊಂದಿಗೆ ವೈದ್ಯರು ಕೊಟ್ಟ ಔಷಧದ ಚೀಟಿ, ಖರೀದಿಸಿದ ಮಾತ್ರೆಗಳ ಬಿಲ್‌ನ ಮೂಲಪ್ರತಿಯನ್ನು ಬ್ಯಾಗ್‌ನಲ್ಲಿ ಹಾಕಿಕೊಟ್ಟಿದ್ದೆ. ಆದರೆ ಶಂಕರ ಪೂಜಾರಿ ಅವರು ಕುವೈತ್‌ಗೆ ಹೋಗುವಾಗ ಮಾತ್ರೆಯ ಕಟ್ಟನ್ನು ಮಾತ್ರ ಒಯ್ದಿದ್ದು, ಔಷಧದ ಚೀಟಿ ಮತ್ತು ಬಿಲ್‌ನ ಮೂಲ ಪ್ರತಿಯನ್ನು ಮನೆಯಲ್ಲಿ ಬಿಟ್ಟುಹೋಗಿದ್ದರು. ಕೊಂಡೊಯ್ದ ಮಾತ್ರೆಗೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಕುವೈತ್‌ನ ಪೊಲೀಸರು ಜೂನ್ 13ರಂದು ಕುವೈತ್ ವಿಮಾನ ನಿಲ್ದಾಣದಲ್ಲಿ ಶಂಕರ್‌ರನ್ನು ಬಂಧಿಸಿದ್ದರು. ಈ ವಿಷಯ ನಮಗೆ 20 ದಿನಗಳ ಬಳಿಕ ಶಂಕರ್ ಅವರ ಪತ್ನಿ ಜ್ಯೋತಿ ಅವರಿಂದ ತಿಳಿಯಿತು ಎಂದು ಮುಬಾರಕ್ ಅಲಿ ತಿಳಿಸಿದರು.

ಆಗ ನಾವು ಕುಂದಾಪುರದ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಇನ್‌ಸ್ಪೆಕ್ಟರ್ ರೊಂದಿಗೆ ಚರ್ಚಿಸಿದ್ದೇವೆ. ಅವರು ನಮಗೆ ಶಂಕರ ಪೂಜಾರಿ ಅವರ ನೆರೆಮನೆ ಯವರಾದ ಬಿಜೆಪಿ ಎಸ್‌ಸಿ ಜಿಲ್ಲಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಾಗಿರುವ ಗೋಪಾಲ ಕಳಂಜೆ ಅವರನ್ನು ಪರಿಚಯಿಸಿದ್ದಾಗಿ ತಿಳಿಸಿದರು.

 ಅನಂತರ ನಾವು ಗೋಪಾಲ ಅವರು ಹೇಳಿದಂತೆ ಮಾತ್ರೆಗಳ ಬಿಲ್ಲು, ವೈದ್ಯರ ಸರ್ಟಿಫಿಕೇಟ್, ಎಂಆರ್‌ಐಸಿಡಿಯೊಂಜಿಗೆ ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್‌ರನ್ನು ಭೇಟಿಯಾಗಿ ಇವರ ಪತ್ರಗಳೊಂದಿಗೆ ಕಳುಹಿಸಿದ್ದೇವೆ. ಅಲ್ಲದೇ ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಶಂಕರ್ ಅವರನ್ನು ಬಿಡುಗಡೆ ಗೊಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತಿದ್ದೇವೆ ಎಂದು ವಿವರಿಸಿದರು.

ಶಂಕರ್ ಪೂಜಾರಿ ನಿರಪರಾಧಿ

ಆದರೆ ಜ್ಯೋತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಅವರು ನಿಜಾಂಶ ಅರಿಯದೇ ಸುಳ್ಳು ಹೇಳಿಕೆಗಳನ್ನು ನೀಡುತಿದ್ದಾರೆ. ನಾವು ಇದನ್ನು ತಲೆಗೆ ಹಚ್ಚಿಕೊಳ್ಳದೇ ಶಂಕರ ಪೂಜಾರಿ ಅವರ ಬಿಡುಗಡೆಗೆ ಪ್ರಯತ್ನ ಮುಂದುವರಿಸಿದ್ದೇವೆ. ಇಡೀ ಪ್ರಕರಣದಲ್ಲಿ ಶಂಕರ ಪೂಜಾರಿ ನಿರಪರಾಧಿಯಾಗಿದ್ದು, ನಾವು ಕಳುಹಿಸಿದ ಮಾತ್ರೆಗಳಿಗೆ ಕುವೈತ್‌ನಲ್ಲಿ ನಿಷೇಧವಿದೆ ಎಂಬ ವಿಷಯ ಅರಿಯದೇ ಕಳುಹಿಸಿದ್ದರಿಂದ ಇಷ್ಟೆಲ್ಲಾ ತೊಂದರೆಗಳು ಎದುರಾಗಿದೆ. ಹೀಗಾಗಿ ಅವರ ಬಿಡುಗಡೆಗೆ ನಮ್ಮ ಕೈಲಾದ ಎಲ್ಲಾ ಪ್ರಯತ್ನ ಹಾಗೂ ಸಹಾಯವನ್ನು ನಾವು ಮುಂದೆಯೂ ಮಾಡುತ್ತೇವೆ ಎಂದು ಮುಬಾರಕ್ ಅಲಿ ನುಡಿದರು.

ಆರೋಪ ಸುಳ್ಳು

ನಾವು ಕೆಎಂಸಿ ವೈದ್ಯರು ನೀಡಿದ ಔಷಧ ಚೀಟಿಯ ದಿನಾಂಕವನ್ನು ತಿದ್ದಿರುವುದಾಗಿ ಮಾಡಿರುವ ಆರೋಪ ನಿಜವಲ್ಲ. ನನ್ನ ಅತ್ತೆ ತಸ್ಲೀಮ್ ಫಾತಿಮ ಅವರು ಇದೇ ಜನವರಿ ತಿಂಗಳಲ್ಲಿ ಊರಿಗೆ ಬಂದಿದ್ದು, ಎ. 30ರಂದು ಮರಳಿ ಕುವೈತ್‌ಗೆ ತೆರಳಿದ್ದರು. ತಮ್ಮನ್ನು ಬಾಧಿಸುತಿದ್ದ ಬೆನ್ನು ನೋವಿಗಾಗಿ ಅವರು ಕೆಎಂಸಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಎ.9ರಂದು ಫಾತಿಮಾರನ್ನು ಪರೀಕ್ಷಿಸಿದ ವೈದ್ಯರು ಮೂರು ಮಾತ್ರೆಗಳನ್ನು ತಲಾ 20ರಂತು ಬರೆದು ಕೊಟ್ಟಿದ್ದರು. ಕುವೈತ್‌ಗೆ ತೆರಳುವ ಮುನ್ನ ಇನ್ನೊಮ್ಮೆ ವೈದ್ಯರನ್ನು ಭೇಟಿಯಾಗಿ ತಲಾ 40 ಮಾತ್ರೆಗಳನ್ನು ತಮ್ಮೆಂದಿಗೆ ಒಯ್ದಿದ್ದರು ಎಂದರು.

ಈ ಮಾತ್ರೆಗಳು ಖಾಲಿಯಾಗಿ ನೋವು ಇನ್ನೂ ಇದ್ದ ಕಾರಣ, ಊರಿಗೆ ಬಂದ ಶಂಕರ ಪೂಜಾರಿ ಅವರ ಮೂಲಕ ಅದೇ ಮಾತ್ರೆ ಕಳುಹಿಸಲು ಹೇಳಿದ್ದರು. ಅದೇ ವೈದ್ಯರ ಚೀಟಿಯನ್ನು ತೋರಿಸಿ ಉಡುಪಿಯ ಮೆಡಿಕಲ್ ಶಾಪ್‌ನಿಂದ ತಲಾ 300 ಮಾತ್ರೆಗಳನ್ನು ಖರೀದಿಸಿ ಕಳುಹಿಸಲಾಗಿತ್ತು ಎಂದು ಸ್ಪಷ್ಟ ಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೋಪಾಲ ಕಳಂಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News