ಸೌದಿ ಅರೇಬಿಯದಲ್ಲಿ ಭಾರತೀಯ ಮಹಿಳೆ ಸಾವು: ಅನುಮಾನ ವ್ಯಕ್ತಪಡಿಸಿದ ಕುಟುಂಬ

Update: 2018-09-01 15:22 GMT

ಹೈದರಾಬಾದ್, ಸೆ.1: ಸೌದಿ ಅರೇಬಿಯದ ರಿಯಾದ್‌ಗೆ ಕಳ್ಳಸಾಗಾಣೆ ಮಾಡಲ್ಪಟ್ಟಿದ್ದ ಹೈದರಾಬಾದ್ ಮೂಲದ ಮಹಿಳೆ ನಿಗೂಡ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆಕೆಯನ್ನು ಆಕೆಯ ಮಾಲಕರು ಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು ಈ ಬಗ್ಗೆ ಗಮನ ಹರಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರಲ್ಲಿ ವಿನಂತಿಸಿದ್ದಾರೆ ಮತ್ತು ಅಂತ್ಯಕ್ರಿಯೆ ನಡೆಸುವ ಸಲುವಾಗಿ ಮೃತದೇಹವನ್ನು ಸ್ವದೇಶಕ್ಕೆ ತರಲು ನೆರವಾಗುವಂತೆ ಕೋರಿದ್ದಾರೆ.

“ನನ್ನ ತಾಯಿ ಶಹೀನ್ ಅವರನ್ನು ಸಂಪರ್ಕಿಸಿದ ಏಜೆಂಟ್‌ವೊಬ್ಬರು ಆಕೆಗೆ ಸೌದಿ ಅರೇಬಿಯದಲ್ಲಿ ಮಾಸಿಕ 20,000 ರೂ. ಸಂಬಳ ಬರುವ ಉದ್ಯೋಗ ತೆಗೆಸಿಕೊಡುವುದಾಗಿ ಭರವಸೆ ನೀಡಿದ್ದರು. ಆಕೆ ಮಾತನ್ನು ನಂಬಿ ನನ್ನ ತಾಯಿ 2016 ಡಿಸೆಂಬರ್ 20ರಂದು ಸೌದಿ ಅರೇಬಿಯಕ್ಕೆ ತೆರಳಿದ್ದರು. ಆಕೆಯನ್ನು ಮೊದಲಿಗೆ ದುಬೈಗೆ ಕಳುಹಿಸಲಾಗಿ ನಂತರ ಸೌದಿ ಅರೇಬಿಯಕ್ಕೆ ಕಳುಹಿಸಲಾಯಿತು. ಅಲ್ಲಿ ಆಕೆಯ ಮಾಲಕರು ಆಕೆಯನ್ನು ಮನೆಗೆಲಸಕ್ಕೆ ಮತ್ತು ಅವರ ಮಕ್ಕಳನ್ನು ನೋಡಿಕೊಳ್ಳಲು ನೇಮಿಸಿದ್ದರು. ಆಕೆಗೆ 20,000 ಸಂಬಳದ ಬದಲು 16,000 ರೂ. ನೀಡಲಾಗುತ್ತಿತ್ತು” ಎಂದು ಮೃತ ಮಹಿಳೆಯ ಪುತ್ರಿ ಬಸೀನಾ ತಿಳಿಸಿದ್ದಾರೆ.

“ಕಳೆದ ಜುಲೈಯಿಂದ ನನ್ನ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ವಾಪಸ್ ಕಳುಹಿಸಲು ತನ್ನ ಮಾಲಕರಿಗೆ ಮನವಿ ಮಾಡುವಂತೆ ಆಕೆ ನನ್ನಲ್ಲಿ ಹೇಳಿದ್ದರು. ಆಕೆಯನ್ನು ವಾಪಸ್ ಕಳುಹಿಸುವುದಾಗಿ ಭರವಸೆ ನೀಡಿದ ಮಾಲಕರು ನಂತರ ಆಕೆಗೆ ಹಿಂಸೆ ನೀಡಿದ್ದರು ಮತ್ತು ಬೆದರಿಕೆ ಹಾಕಿದ್ದರು. ನಂತರ ಆಗಸ್ಟ್ 31ರಂದು ನಮಗೆ ಕರೆ ಮಾಡಿದ ಮಾಲಕರು ನಮ್ಮ ತಾಯಿ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಆದರೆ ಸಾವಿಗೆ ಕಾರಣವನ್ನು ತಿಳಿಸಿರಲಿಲ್ಲ. ಅವರೇ ನನ್ನ ತಾಯಿಯನ್ನು ಹತ್ಯೆ ಮಾಡಿದ್ದಾರೆ ಎಂದು ನಮಗೆ ಅನುಮಾನವಿದೆ” ಎಂದು ಬಸೀನಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News