ಎಲ್‌ಐಸಿ: ಉಡುಪಿ ವಿಭಾಗದಿಂದ 150 ವಿಮಾ ಗ್ರಾಮಗಳ ಘೋಷಣೆ -ಪಿ.ವಿಶ್ವೇಶ್ವರ ರಾವ್
ಉಡುಪಿ, ಸೆ.1: ಈ ಆರ್ಥಿಕ ವರ್ಷದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಉಡುಪಿ ವಿಭಾಗದಲ್ಲಿ ಸುಮಾರು 150 ವಿಮಾ ಗ್ರಾಮಗಳನ್ನು ಘೋಷಿಸುವ ಗುರಿ ಇದ್ದು, ಈ ಗ್ರಾಮಗಳ ಅಭಿವೃದ್ಧಿಗೆ 25,000ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು ಎಂದು ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಪಿ. ವಿಶ್ವೇಶ್ವರರಾವ್ ತಿಳಿಸಿದ್ದಾರೆ.
ದೇಶದ ಅಗ್ರಗಣ್ಯ ವಿಮಾ ಕಂಪೆನಿಯಾದ ಎಲ್ಲೈಸಿಯ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸೆ.1ರಿಂದ 7ರವರೆಗೆ ಆಚರಿಸಲಾಗುವ ವಿಮಾ ಸಪ್ತಾಹದ ಸಂದರ್ಭದಲ್ಲಿ ಸಂಸ್ಥೆಯ ಸಾಧನೆಗಳನ್ನು ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಕಳೆದ ಆರ್ಥಿಕ ವರ್ಷದಲ್ಲಿ 130 ಗ್ರಾಮಗಳನ್ನು ವಿಮಾ ಗ್ರಾಮಗಳೆಂದು ಘೋಷಿಸಲಾಗಿತ್ತು. ಅಲ್ಲಿ ಮಾರಾಟವಾಗುವ ಪಾಲಿಸಿಗಳ ಆಧಾರದಲ್ಲಿ ಆ ಗ್ರಾಮಕ್ಕೆ ಗರಿಷ್ಠ ಒಂದು ಲಕ್ಷ ರೂ.ವರೆಗೆ ಸಹಾಯವನ್ನು ಗ್ರಾಮದ ಅಭಿವೃದ್ಧಿಗಾಗಿ ನಾವು ನೀಡುತ್ತೇವೆ ಎಂದರು. ಅದೇ ರೀತಿ ಕಳೆದ ವರ್ಷ 8 ಶಾಲೆಗಳನ್ನು ವಿಮಾ ಶಾಲೆಗಳೆಂದು ಘೋಷಿಸಲಾಗಿದೆ ಎಂದರು.
2017-18ರಲ್ಲಿ ವಿಭಾಗವು 1,35,941 ಹೊಸ ಪಾಲಿಸಿಗಳನ್ನು ಮಾಡುವ ಮೂಲಕ 305.60 ಕೋಟಿ ರೂ.ಗಳನ್ನು ಪ್ರಥಮ ಪ್ರೀಮಿಯಂ ಆಗಿ ಗಳಿಸಿದ್ದು ಶೇ.103.25 ಸಾಧನೆ ಮಾಡಿದೆ. ಈ ವರ್ಷದಲ್ಲಿ 1.70 ಲಕ್ಷ ಪಾಲಿಸಿಗಳನ್ನು ಮಾಡಿ 350 ಕೋಟಿ ರೂ.ಗಳನ್ನು ಪ್ರಥಮ ಪ್ರೀಮಿಯಂ ಆಗಿ ಗಳಿಸುವ ಗುರಿ ಇದೆ ಎಂದರು.
ಉಡುಪಿ ವಿಭಾಗ ಕಳೆದ ಸಾಲಿನಲ್ಲಿ 2.04 ಲಕ್ಷ ಪಾಲಿಸಿಗಳಿಗೆ ಒಟ್ಟು 833 ಕೋಟಿರೂ. ಪಾವತಿಸಿದೆ. ವಿಭಾಗದಲ್ಲಿರುವ 26.99 ಲಕ್ಷ ಪಾಲಿಸಿಗಳನ್ನು ಈಗಾಗಲೇ ಎನ್‌ಇಎಫ್‌ಟಿ ಜಾಲಕ್ಕೆ ನೊಂದಣಿ ಮಾಡಲಾಗಿದೆ ಎಂದು ರಾವ್ ತಿಳಿಸಿದರು.
1956ರಲ್ಲಿ ಪ್ರಾರಂಭವಾದ ಜೀವವಿಮಾ ನಿಗಮ ಇಂದು ದೇಶದ ಆರ್ಥಿಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ದೇಶದ ವಿಮಾ ಮಾರುಕಟ್ಟೆಯಲ್ಲಿ ಈಗಲೂ ಶೇ.75.67ರಷ್ಟು ಸಾಮ್ಯತೆಯನ್ನು ಹೊಂದಿರುವ ಎಲ್‌ಐಸಿ, ಪ್ರಥಮ ಪ್ರೀಮಿಯಂನಲ್ಲಿ ಶೇ.69.40ರಷ್ಟನ್ನು ಹೊಂದಿದೆ. ಪ್ರಥಮ ವರ್ಷದ ಪ್ರೀಮಿಯಂನಲ್ಲಿ 2017-18ನೇ ಸಾಲಿನಲ್ಲಿ ಶೇ.8.12ರ ಪ್ರಗತಿ ದಾಖಲಾಗಿದೆ ಎಂದು ವಿಶ್ವೇಶ್ವರ ರಾವ್ ನುಡಿದರು.
ಕೇವಲ 5 ಕೋಟಿ ರೂ.ಬಂಡವಾಳ ಹಾಗೂ 352 ಕೋಟಿ ರೂ. ಒಟ್ಟು ಆಸ್ತಿಯೊಂದಿಗೆ 1956ರಲ್ಲಿ ಪ್ರಾರಂಭಗೊಂಡ ಎಲ್‌ಐಸಿ ಇಂದು 28.45 ಲಕ್ಷ ಕೋಟಿ ರೂ. ಒಟ್ಟು ಆಸ್ತಿ ಹಾಗೂ 25.84 ಲಕ್ಷ ಕೋಟಿ ರೂ. ಲೈಫ್ ಫಂಡ್‌ನ್ನು ಹೊಂದಿದೆ. ಸಂಸ್ಥೆಗೆ ಇಂದು ದೇಶದಲ್ಲಿ 4826 ಕಚೇರಿಗಳು, 1.11ಲಕ್ಷ ಉದ್ಯೋಗಿಗಳು, 11.48 ಲಕ್ಷ ಏಜೆಂಟ್‌ಗಳು ಹಾಗೂ 29 ಕೋಟಿಗೂ ಅಧಿಕ ಪಾಲಿಸಿದಾರರನ್ನು ಒಳಗೊಂಡ ಬೃಹತ್ ಸಂಸ್ಥೆಯಾಗಿದೆ. 14ದೇಶಗಳಲ್ಲಿ ಶಾಖಾ ಕಚೇರಿಗಳಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ವಿಭಾಗದ ಸೇಲ್ಸ್ ಮ್ಯಾನೇಜರ್ ಎಸ್. ಎನ್. ಸದಾನಂದ ಕಾಮತ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ವೆಂಕಟರಮಣ ಶೀರೂರ್ ಉಪಸ್ಥಿತರಿದ್ದರು.