ಪ್ರಧಾನಿ ಮೋದಿಯಿಂದ ‘ಇಂಡಿಯಾ ಪೋಸ್ಟ್’ ಗೆ ಚಾಲನೆ

Update: 2018-09-01 15:26 GMT

ಹೊಸದಿಲ್ಲಿ, ಸೆ.1: ಪ್ರಧಾನ ಮಂತ್ರಿ ನರೇಂದ್ರ ಮೋದಿ ದಿಲ್ಲಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ಗೆ ಚಾಲನೆ ನೀಡಿದರು. ಈ ಬ್ಯಾಂಕ್ ದೇಶಾದ್ಯಂತ 650 ಶಾಖೆಗಳನ್ನು ಹೊಂದಲಿದೆ.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ದೇಶದ 1.55 ಲಕ್ಷ ಅಂಚೆ ಕಚೇರಿಗಳನ್ನು ಕೇಂದ್ರೀಕೃತ ವ್ಯವಸ್ಥೆಯೊಂದಿಗೆ ಸೇರಿಸಲಿದೆ. ಸಣ್ಣ ಪ್ರಮಾಣದ ಪಾವತಿ ಬ್ಯಾಂಕ್ ಪೂರೈಕೆದಾರರು ಆಗಲಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಹುತೇಕ ಎಲ್ಲ ಬ್ಯಾಂಕಿಂಗ್ ಸೇವೆಯನ್ನು ಒದಗಿಸಲಿದೆ. ಆದರೆ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಅಧಿಕಾರವನ್ನು ಹೊಂದಿರುವುದಿಲ್ಲ.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೀಡುವ ನಿಧಿಯನ್ನು ಕೇಂದ್ರ ಸರಕಾರ 1,435 ಕೋಟಿ ರೂ.ಗೆ ಏರಿಸಿದ್ದು, ಇದರಿಂದ ಈ ಕ್ಷೇತ್ರದಲ್ಲಿ ಈಗಾಗಲೇ ಅಧಿಪತ್ಯ ಹೊಂದಿರುವ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಮತ್ತು ಪೇಟಿಎಂ ಜೊತೆ ಪೈಪೋಟಿ ನಡೆಸಲು ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಿಂದ ರೈತರಿಗೆ ಸಹಾಯವಾಗಲಿದೆ. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಮುಂತಾದ ಯೋಜನೆಗಳಿಗೆ ಈ ಬ್ಯಾಂಕ್‌ನಿಂದ ಬಲ ಸಿಗಲಿದೆ ಎಂದು ಹೇಳಿದ್ದಾರೆ.

ಭಾರತೀಯ ಅಂಚೆ ಇಲಾಕೆಯ ಅಡಿಯಲ್ಲಿ 1.5 ಲಕ್ಷ ಅಂಚೆ ಕಚೇರಿಗಳು ಮತ್ತು ಮೂರು ಲಕ್ಷ ಪೋಸ್ಟ್‌ಮ್ಯಾನ್‌ಗಳು ಇದ್ದಾರೆ. ಒಂದು ಅತ್ಯಂತ ಪ್ರಬಲ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಇಂಥ ಒಂದು ಬೃಹತ್ ವ್ಯವಸ್ಥೆಯನ್ನು ಪರಸ್ಪರ ಜೋಡಿಸುವ ಸವಾಲಿನ ಕೆಲಸಕ್ಕೆ ನಾವು ಕೈ ಹಾಕಿದ್ದೇವೆ. ನಮ್ಮ ಸರಕಾರ ಹಳೆಯ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಮೂಲಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನವು ಅಂಚೆ ಕಚೇರಿಗಳಿಗೆ ಸವಾಲು ಹಾಕಿತ್ತು. ಈಗ ಅದೇ ತಂತ್ರಜ್ಞಾನವನ್ನು ಬಳಸಿ ಈ ಸವಾಲನ್ನು ಅವಕಾಶವನ್ನಾಗಿ ಬದಲಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ಒಂದು ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು ಅಂಚೆ ಇಲಾಕೆ ಮತ್ತು ದೂರಸಂಪರ್ಕ ಸಚಿವಾಲಯದ ವ್ಯಾಪ್ತಿಯಲ್ಲಿದೆ ಹಾಗೂ ಆರ್‌ಬಿಐ ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ.

ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಉಳಿತಾಯ ಖಾತೆಗಳನ್ನು ತೆರೆಯಬಹುದಾಗಿದೆ. ಈ ಖಾತೆಗಳಲ್ಲಿ ಜಮೆ ಮಾಡುವ ಹಣಕ್ಕೆ ಬಡ್ಡಿ ಪಡೆಯಬಹುದಾಗಿದೆ ಮತ್ತು ಇದರಲ್ಲಿ ನಗದು ಮರುಪಡೆಯಲು ಯಾವುದೇ ಮಿತಿ ಇರುವುದಿಲ್ಲ. ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅನ್ನು ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಎಸ್‌ಎಂಎಸ್ ಹಾಗೂ ಐವಿಆರ್‌ಗಳ ಮೂಲಕ ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News