ಸರಳೇಬೆಟ್ಟುವಿನ ವಿಕಲಚೇತನ ಸಹೋದರರಿಗೆ ನೆರವು: ಲ್ಯಾಪ್‌ಟಾಪ್, ಗಾಲಿಕುರ್ಚಿ ವಿತರಣೆ
ಉಡುಪಿ, ಸೆ.1: ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಮತ್ತು ಮಂಗಳೂರು ವತಿಯಿಂದ ಮಣಿಪಾಲ ಸರಳೇಬೆಟ್ಟು ವಾರ್ಡಿನ ಗಣೇಶಬಾಗ್ ನಿವಾಸಿ ಪ್ರಮೀಳಾ ಪೂಜಾರಿಯ ಮಕ್ಕಳಾದ ಧನುಷ್ (19) ಮತ್ತು ದರ್ಶನ್ (16) ಎಂಬ ವಿಕಲಚೇತನ ಸಹೋದರರಿಗೆ ಲ್ಯಾಪ್‌ಟಾಪ್ ಹಾಗೂ ಗಾಲಿ ಕುರ್ಚಿ ಹಸ್ತಾಂತರ ಕಾರ್ಯಕ್ರಮವನ್ನು ಸೆ.2ರಂದು ಮಧ್ಯಾ್ನ 12ಗಂಟೆಗೆ ಹಮ್ಮಿ ಕೊಳ್ಳಲಾಗಿದೆ.
ಮಣಿಪಾಲ ಎಂಐಟಿಯಲ್ಲಿ ಪ್ರಥಮ ಡಿಪ್ಲೋಮ ಕಂಪ್ಯೂಟರ್ ಸಯನ್ಸ್ ಕಲಿಯುತ್ತಿರುವ ಧನುಷ್ ಮತ್ತು ಮಣಿಪಾಲ ಜೂನಿಯರ್ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದರ್ಶನ್‌ಗೆ ಶಿಕ್ಷಣ ಮುಂದುವರಿಸಲು ವಿಕಲಚೇತನವು ಅಡ್ಡಿಯಾಗಿದ್ದು, ಈ ಬಗ್ಗೆ ಚಿಕಿತ್ಸೆ ನೀಡಿದ್ದರೂ ಇವರಿಬ್ಬರು ಈವರೆಗೆ ಗುಣಮುಖರಾಗಿಲ್ಲ. ಇದೀಗ ಮಕ್ಕಳು ಇತರರ ಸಹಾಯದಿಂದಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.
ಸರಕಾರದಿಂದ ಮಂಜೂರಾದ ಮನೆಯಲ್ಲಿ ವಾಸವಾಗಿರುವ ಈ ಮಕ್ಕಳನ್ನು ಕಾಲು ದಾರಿಯಲ್ಲಿ ಹೊತ್ತುಕೊಂಡು ಗುಡ್ಡವೇರಬೇಕಾದ ಪರಿಸ್ಥಿತಿ ಇದೆ. ಪ್ರತಿ ಭಾವಂತರಾಗಿರುವ ಇವರು ಮನೆಯಲ್ಲೇ ಕುಳಿತು ಕಂಪ್ಯೂಟರಿನಲ್ಲಿ ಉದ್ಯೊಗ ಮಾಡುವ ಇರಾದೆ ಹೊಂದಿದ್ದಾರೆ. ಇದನ್ನು ಮನಗಂಡ ಜಮಾಅತೆ ಇಸ್ಲಾಮೀ ಹಿಂದ್ ಲ್ಯಾಪ್ ಟಾಪ್ ಹಾಗೂ ಗಾಲಿ ಕುರ್ಚಿಯನ್ನು ಅವರ ಮನೆಯಲ್ಲೇ ಹಸ್ತಾಂತರಿಸಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಎಂ.ಶಬ್ಬೀರ್ ಮಲ್ಪೆ, ಅಬ್ದುಲ್ ಅಝೀಝ್ ಆದಿಉಡುಪಿ, ನಿಸ್ಸಾರ್ ಅಹ್ಮದ್, ರಿಯಾಝ್ ಕುಕ್ಕಿಕಟ್ಟೆ ಭಾಗವಹಿಸಲಿದ್ದಾರೆ.