ಕಾಪು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉದ್ಘಾಟನೆ

Update: 2018-09-01 16:40 GMT

ಕಾಪು, ಸೆ. 1: ಮೂಳೂರಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ಉಚ್ಚಿಲ ಉಪ ಶಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕನ್ನು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿದರು.

ಸಮಾರಂಭದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ನ ದೆಹಲಿ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸುವುದನ್ನು ನೇರ ಪ್ರಸಾರವನ್ನು ಎಲ್‍ಇಡಿ ಸ್ಕ್ರೀನ್‍ಮೂಲಕ ಪ್ರದರ್ಶಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಲಾಲಾಜಿ ಮೆಂಡನ್, ಕೇವಲ ಆಧಾರ್ ಕಾರ್ಡ್ ಅಥವಾ ಮೊಬೈಲ್ ನಂಬರ್‍ನಿಂದಷ್ಟೇ ಒಂದು ನಿಮಿಷಗಳ ಅವಧಿಯೊಳಗೆ ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಯೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ಹೊಂದಲು ಸಾಧ್ಯವಾಗಿದೆ.  ಮನೆ ಬಾಗಿಲಿಗೆ ಅಂಚೆಯಣ್ಣರ ಮೂಲಕವೇ ಬ್ಯಾಂಕ್ ಆಗಮಿಸಲಿದ್ದು, ಇದು ಇಂಡಿಯನ್ ಪೋಸ್ಟ್ ಇಲಾಖೆಯ ಕುರಿತಾಗಿ ಭಾರತೀಯರಿಗೆ ಇರುವ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.  

ಮುಖ್ಯ ಅತಿಥಿಗಳಾಗಿ ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ, ಉಡುಪಿಯ ಸಹಾಯಕ ಅಂಚೆ ಅಧೀಕ್ಷಕ ಎನ್. ಬಿ. ಶ್ರೀನಾಥ್, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಹಿರಿಯ ಸೇಲ್ಸ್ ಮ್ಯಾನೇಜರ್ ಸೂರ್ಯಕಾಂತ ಸಾಹು, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ಕೆ. ಸುಭಾಶ್ಚಂದ್ರ ರಾಜಮನೆ, ಅಂಚೆ ಮೇಲ್ವಿಚಾರಕರಾದ ವಾಸುದೇವ ತೊಟ್ಟಂ, ಜನಾರ್ದನ ಕೋಟ್ಯಾನ್, ಗೋವಿಂದ ಶೆಟ್ಟಿ ಉಪಸ್ಥಿತರಿದ್ದರು. ಉಚ್ಚಿಲ ಅಂಚೆ ಪಾಲಕಿ ಯಶೋದಾ ಹಾಗೂ ಕಳತ್ತೂರು ಅಂಚೆ ಪಾಲಕ ದಿವಾಕರ ಬಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News