ಸೆ.9: ವಿಶ್ವ ಬಂಟ ಸಮ್ಮಿಲನಕ್ಕೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ: ಐಕಳ ಹರೀಶ್ ಶೆಟ್ಟಿ

Update: 2018-09-01 16:44 GMT

ಮಂಗಳೂರು, ಸೆ. 1: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮತ್ತು ಉಡುಪಿ ಜಿಲ್ಲಾ ಸಂಘಗಳ ಸಹಯೋಗದೊಂದಿಗೆ ರವಿವಾರ ಸೆ.9ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ವಿಶ್ವ ಬಂಟರ ಸಮ್ಮಿಲನ -2018 ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ವಿಶ್ರಾಂತ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಎನ್‌ ಸಂತೋಷ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮುಖ್ಯ ಅತಿಯಾಗಿ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರಿಶ್ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವ ನಾಥ ಶೆಟ್ಟಿ, ಉದ್ಯಮಿ ಡಾ.ಆರ್.ಎನ್.ಶೆಟ್ಟಿ, ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಡಾ. ವಿನಯ ಹೆಗ್ಡೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಈ ಸಮ್ಮಿಲನ ಸಮುದಾಯದ ಜನರನ್ನು ಸಂಘಟಿಸುವುದು ಹಾಗೂ ವಿವಿಧ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸುವುದಾಗಿದೆ. ಸಮ್ಮಿಲನ ಕಾರ್ಯಕ್ರಮದಲ್ಲಿ ರಾಜಕೀಯ ವೇದಿಕೆ, ಚಲನಚಿತ್ರ ವೇದಿಕೆ, ಯಕ್ಷಗಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಹಿರಿಯರನ್ನು , ಗಣ್ಯರನ್ನು, ಅನಿವಾಸಿ ಉದ್ಯಮಿಗಳನ್ನು , ಜನಪ್ರತಿನಿಧಿಗಳನ್ನು , ಚಲನಚಿತ್ರ ಹಾಗೂ ಕಿರುತೆರೆಯ ನಟ-ನಟಿಯರು, ಒಕ್ಕೂಟದ ನಿರ್ದೇಶಕರು, ಮಹಾ ಪೋಷಕರು, ಪೊಷಕರು, ಆಡಳಿತ ಮಂಡಳಿಯ ಸದಸ್ಯರು ಮತ್ತು ದೇಶ ವಿದೇಶಗಳ ಸಂಘದ ಸದಸ್ಯರು   ಭಾಗವಹಿಸಲಿರುವರು ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಸಮಾಜದ ಬಡವರಿಗೆ ಮನೆ ನಿರ್ಮಾಣ ಯೋಜನೆ:- ಬಂಟ ಸಮಾಜ ಸೇರಿದಂತೆ ಸಮಾಜದಲ್ಲಿ ಬಡತನದಲ್ಲಿರುವ ಮನೆ ಇಲ್ಲದ ಬಡವರಿಗೆ ದಾನಿಗಳ ನೆರವಿನಿಂದ ಮನೆ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಪ್ರಕಾರ ಈಗಾಗಲೆ ಕೆಲವು ಮನೆ ನಿರ್ಮಿಸಲಾಗಿದೆ. ಅದೇ ರೀತಿ ಮುಂದಿನ ಹಂತದಲ್ಲಿ ಕರ್ನಿರೆಯಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬಡವರಿಗೆ ಮನೆ ನಿರ್ಮಾಣದ ಯೋಜನೆ ಹೊಂದಲಾಗಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಸರಕಾರದಿಂದಲೂ ಬಡವರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಇದೆ ಈ ನಿಟ್ಟಿನಲ್ಲಿ ಬಡವರನ್ನು ಗುರುತಿಸಿ ಅವರಿಗೂ ಮನೆ ನಿರ್ಮಿಸಲು ನೆರವಾಗುವುದು. ಬಂಟ ಸಮಾಜ ಅಲ್ಲದೆ ಇತರ ಸಮಾಜದ ಅಶಕ್ತ ಕುಟುಂಬಗಳಿಗೆ ನೆರವು ನೀಡುವ ಚಿಂತನೆ ಒಕ್ಕೂಟ ಹೊಂದಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸುಮಾರು 20ಲಕ್ಷಕ್ಕೂ ಅಧಿಕ ಮೊತ್ತವನ್ನುಈ ರೀತಿಯ ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸಲಾಗಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವಾ, ಖಜಾಂಜಿ ಕೊಲ್ಲಾಡಿ ಬಾಲಕೃಷ್ಣ ರೈ ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News