×
Ad

ಗಾಂಜಾ ಮಾರಾಟ ಪ್ರಕರಣ: ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ

Update: 2018-09-01 22:19 IST

ಮಂಗಳೂರು, ಸೆ.1: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗೆ ವಿಶೇಷ ನ್ಯಾಯಾಲಯ 5 ವರ್ಷ ಕಠಿಣ ಸಜೆ ಹಾಗೂ 50ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕೋಟೆಕಾರು ಕೆ.ಸಿ.ರೋಡು ನಿವಾಸಿ ಇಮ್ತಿಯಾಝ್ (28) ಶಿಕ್ಷೆಗೊಳಗಾದ ಅಪರಾಧಿ. ಸಾಕ್ಷಾಧಾರ ಕೊರತೆಯಿಂದ ಇನ್ನೊಬ್ಬ ಆರೋಪಿ ಅಬ್ದುಲ್ ಅಝೀಝ್ ಖುಲಾಸೆಗೊಂಡಿದ್ದಾನೆ.

ಪ್ರಕರಣ ವಿವರ: 2016ರ ಡಿ.19ರಂದು ಸಂಜೆ 4:45ಕ್ಕೆ ನಗರದ ಕೂಳೂರು- ಕಾವೂರು ರಸ್ತೆಯ ಗುಡ್ಡೆಯಂಗಡಿ ರಾಯಿಕಟ್ಟೆ ಕಡೆಗೆ ಹೋಗುವ ಅಡ್ಡರಸ್ತೆಯ ಬಳಿ ಬೈಕ್‌ನಲ್ಲಿ ಇಮ್ತಿಯಾಝ್ ಮತ್ತು ಅಬ್ದುಲ್ ಅಝೀಝ್ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾವೂರು ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎ. ನಟರಾಜ್, ಪಿಎಸ್ಸೈ ಉಮೇಶ್‌ಕುಮಾರ್, ಸಿಬ್ಬಂದಿ, ಪಂಚರಾದ ಕಾರ್ಪೊರೇಟರ್‌ದಯಾನಂದ ಶೆಟ್ಟಿ ಜತೆ ದಾಳಿ ಮಾಡಿದ್ದು, ಆರೋಪಿ ಅಬ್ದುಲ್ ಅಝೀಝ್ ಸ್ಥಳದಿಂದ ಓಡಿ ಹೋಗಿದ್ದು, ಆರೋಪಿ ಇಮ್ತಿಯಾಝ್‌ನನ್ನು ಬೈಕ್ ಸಹಿತ ಬಂಧಿಸಿ, 2ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣ ಆಚಾರ್ ವಾದ-ವಿವಾದಗಳನ್ನು ಆಲಿಸಿ, ಆರೋಪಿ ಇಮ್ತಿಯಾಜ್‌ಗೆ 5 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಾದಾ ಶಿಕ್ಷೆ ವಿಧಿಸಿದ್ದಾರೆ. ಆರೋಪಿ 7 ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯನ್ನು ಶಿಕ್ಷೆಯಿಂದ ಕಡಿತಗೊಳಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬೈಕನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.

ಇನ್ನೊಬ್ಬ ಆರೋಪಿ ಅಬ್ದುಲ್ ಅಝೀಝ್‌ನನ್ನು ಸಾಕ್ಷಾಧಾರ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ ಎನ್‌ಡಿಪಿಎಸ್ ಕಾಯ್ದೆಯಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯಾ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News