×
Ad

ಸರಕಾರಿ-ಖಾಸಗಿ ಬಸ್ ನಿರ್ವಾಹಕರ ಹೊಡೆದಾಟ: ದೂರು-ಪ್ರತಿದೂರು

Update: 2018-09-01 22:58 IST

ಮಂಗಳೂರು, ಸೆ.1: ನಗರದ ಬಿಜೈ ಬಳಿ ಸರಕಾರಿ ಹಾಗೂ ಖಾಸಗಿ ಬಸ್ ನಿರ್ವಾಹಕರ ನಡುವೆ ಹೊಡೆದಾಟ ನಡೆದಿದ್ದು, ಇತ್ತಂಡದ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಚಲಾಯಿಸಿಕೊಂಡು ಬರುತ್ತಿದ್ದಾಗ ಖಾಸಗಿ ಬಸ್ ಚಾಲಕ ರಸ್ತೆಗೆ ಅಡ್ಡವಾಗಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಲ್ಲದೆ ಟಿಕೇಟ್ ಮೆಷಿನ್ ಎಳೆದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸರಕಾರಿ ಬಸ್ ಚಾಲಕ ರಾಜೇಶ್ ಸಾಬು ದೂರಿನಲ್ಲಿ ತಿಳಿಸಿದ್ದಾರೆ.

ಕೆಎಸ್ಸಾರ್ಟಿಸಿ ಬಸ್‌ನವರು ನಮ್ಮ ಬಸ್‌ನ್ನು ಮುಂದಕ್ಕೆ ಹೋಗಲು ಅಡ್ಡಿಪಡಿಸಿದ್ದು, ವಿಚಾರಿಸಿದಾಗ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಖಾಸಗಿ ಬಸ್ ನಿರ್ವಾಹಕ ಪ್ರಶಾಂತ್ ಪ್ರತಿ ದೂರು ನೀಡಿದ್ದಾರೆ.

ಬಸ್‌ನವರ ಹೊಡೆದಾಟದಿಂದ ಸುಮಾರು ಅರ್ಧ ತಾಸು ಬಿಜೈ ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಸ್‌ನಲ್ಲಿದ್ದ ಪ್ರಯಾಣಿಕರು ಸಮಾಧಾನಪಡಿಸಲು ಪ್ರಯತ್ನಿಸಿದ್ದರೂ, ಕೇಳದೆ ಹೊಡೆದಾಡಿಕೊಂಡಿದ್ದಾರೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸ್ಪರ್ಧೆಯಿಂದಾಗಿ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇತ್ತಂಡಗಳ ದೂರು ದಾಖಲಿಸಿಕೊಂಡಿರುವ ಉರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News