ಪ್ರಕರಣದ ವಿಚಾರಣೆಯಲ್ಲಿ ಪ್ರಭಾವ ಬೀರುವ ಯತ್ನ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಿಂದ ಬಹಿರಂಗ

Update: 2018-09-01 17:29 GMT

ಹೊಸದಿಲ್ಲಿ, ಸೆ.1: ಕಾರ್ಪೊರೇಟ್ ವ್ಯಾಜ್ಯದ ವಿಚಾರಣೆ ಸಂದರ್ಭದಲ್ಲಿ ತಮ್ಮ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆದಿತ್ತು ಎಂದು ನ್ಯಾಯಾಲಯ ಕಲಾಪದ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಬಹಿರಂಗಪಡಿಸುವ ಮೂಲಕ ನೆರೆದಿದ್ದ ವಕೀಲರಲ್ಲಿ ಅಚ್ಚರಿ ಮೂಡಿಸಿದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಹ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು, "ಯಾವುದೇ ವ್ಯಕ್ತಿ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಿದರೆ, ಅಂಥವರು ನ್ಯಾಯಾಂಗ ನಿಂದನೆ ವಿಚಾರಣೆಗೆ ಗುರಿಯಾಗಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

ಹೋಟೆಲ್ ರಾಯಲ್ ಪ್ಲಾಜಾದ ಕಾರ್ಪೊರೇಟ್ ವಿವಾದಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾಗಿ ಬ್ಯಾನರ್ಜಿ ಬಹಿರಂಗಪಡಿಸಿದರು. ಈ ವಿಚಾರವನ್ನು ನ್ಯಾಯಮೂರ್ತಿ ಮಿಶ್ರಾ ಬಳಿ ಚರ್ಚಿಸಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದರು. ಆದರೆ ಹಾಗೆ ಮಾಡದಂತೆ ನ್ಯಾಯಮೂರ್ತಿ ಮಿಶ್ರಾ ಸಲಹೆ ಮಾಡಿದರು.

ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದ ಹಿರಿಯ ವಕಳಿಯ ಶ್ಯಾಮ್ ದಿವಾನ್ ಅವರು ಈ ಘಟನೆಯನ್ನು ದೃಢಪಡಿಸಿದ್ದಾರೆ. "ಹೌದು ನ್ಯಾಯಮೂರ್ತಿ ಬ್ಯಾನರ್ಜಿಯವರು ಈ ಬೆಳವಣಿಗೆಯನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಆ ಬಳಿಕ ಪ್ರಕರಣದಿಂದ ಹಿಂದೆ ಸರಿಯದಂತೆ ನಾನು ಮನವಿ ಮಾಡಿದೆ. ಏಕೆಂದರೆ ಅದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News