ನಗರಗಳಿಗೆ ಬಂದು ತಮ್ಮ ಸಿದ್ಧಾಂತ ಹರಡುತ್ತಿರುವ ನಕ್ಸಲೀಯರು: ರಾಜ್ ನಾಥ್ ಸಿಂಗ್

Update: 2018-09-02 07:19 GMT

ಲಕ್ನೋ, ಸೆ.2: ಇದುವರೆಗೆ ಗುಡ್ಡಗಾಡು ಪ್ರದೇಶ ಮತ್ತು ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಮಾವೋವಾದಿ ಉಗ್ರರು ಈಗ ನಗರಗಳಿಗೂ ಲಗ್ಗೆ ಇಟ್ಟು, ಸಾರ್ವಜನಿಕ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವ ಮೂಲಕ ತಮ್ಮ ಸಿದ್ದಾಂತಗಳನ್ನು ಪ್ರಸರಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

"ಹಿಂದೆ 126 ಜಿಲ್ಲೆಗಳಲ್ಲಿ ನಕ್ಸಲೀಯ ಚಟುವಟಿಕೆಗಳು ನಡೆಯುತ್ತಿದ್ದವು. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಇದು ಈಗ 10-12 ಜಿಲ್ಲೆಗಳಿಗೆ ಸೀಮಿತಗೊಂಡಿದೆ. ಆದರೆ ಈಗ ಅವರು ಹೊಸ ಕಾರ್ಯತಂತ್ರಕ್ಕೆ ಮೊರೆ ಹೋಗಿದ್ದಾರೆ. ನಗರಗಳಿಗೆ ಬಂದು ಜನರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದಾರೆ" ಎಂದು "ಹಿಂದೂಸ್ತಾನ್" ಹಿಂದಿ ದೈನಿಕ ಏರ್ಪಡಿಸಿದ್ದ ಶಿಖರ್ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿವರಿಸಿದರು.

ಈ ಬಗ್ಗೆ ಗುಪ್ತಚರ ಏಜೆನ್ಸಿಗಳಿಂದ ಖಚಿತ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದರು.

ಈ ವಾರ ಐವರು ವಿಚಾರವಾದಿಗಳಾದ ಹೈದರಾಬಾದ್‍ನ ಪಿ.ವರವರರಾವ್, ಮುಂಬೈನ ವರ್ಣನ್ ಗೋನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ, ಫರೀದಾಬಾದ್‍ನ ಸುಧಾ ಭಾರದ್ವಾಜ್ ಹಾಗೂ ದೆಹಲಿಯ ಗೌತಮ್ ನವಲಖ ಅವರ ಬಂಧನದಿಂದ ಇದೀಗ ‘ನಗರ ನಕ್ಸಲರು’ ಎಂಬ ಹೊಸ ಪದ ಹುಟ್ಟಿಕೊಂಡಿದೆ. ಜನವರಿ 1ರ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ವಿಚಾರವಾದಿಗಳ ಬಂಧನವನ್ನು ಸಚಿವರು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News