ಗೌರಿಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಂದಲೇ ದಾಭೋಲ್ಕರ್ ಹತ್ಯೆಗೂ ಸಂಚು: ಸಿಬಿಐ
ಪುಣೆ, ಸೆ.2: ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳು, ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಸಂಚು ರೂಪಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಈ ಪೈಕಿ ಒಬ್ಬ ದಾಭೋಲ್ಕರ್ ಅವರ ಶೂಟರ್‍ಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದ ಎಂದು ಪುಣೆ ನ್ಯಾಯಾಲಯಕ್ಕೆ ಸಿಬಿಐ ತಿಳಿಸಿದೆ.
ಸಿಬಿಐ ಕಳೆದ ತಿಂಗಳು ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ಶಂಕಿತ ಆರೋಪಿ ಸಚಿನ್ ಅಂಧೂರೆ ಎಂಬಾತನನ್ನು ಬಂಧಿಸಿತ್ತು. ಅಂಧೂರೆ ಜತೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ರಾಜೇಶ್ ಬಂಗೇರ ಮತ್ತು ಅಮಿತ್ ದಿಗ್ವೇಕರ್ ಎಂಬ ಇಬ್ಬರು ಆರೋಪಿಗಳನ್ನು ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಅಂಧೂರೆಯ ನ್ಯಾಯಾಂಗ ಬಂಧನ ಅವಧಿ ಶನಿವಾರಕ್ಕೆ ಮುಕ್ತಾಯವಾಗಿದೆ. ದಿಗ್ವೇಕರ್ ಮತ್ತು ಬಂಗೇರನನ್ನು ಸೆಪ್ಟೆಂಬರ್ 10ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದ್ದು, ಅಂಧೂರೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎರಡೂ ಪ್ರಕರಣಗಳಿಗೆ ಮತ್ತು ಆರೋಪಿಗಳಿಗೆ ಸಂಬಂಧ ಇದೆ ಎಂದು ಸಿಬಿಐ ಹೇಳಿದೆ. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕರ್ನಾಟಕದ ವಿಶೇಷ ತನಿಖಾ ತಂಡದ ವಶದಿಂದ ಇಬ್ಬರು ಆರೋಪಿಗಳನ್ನು ಸಿಬಿಐ ವಶಕ್ಕೆ ಪಡೆದಿತ್ತು.
"ಬಂಗೇರ ಸರ್ಕಾರಿ ಉದ್ಯೋಗಿಯಾಗಿದ್ದು, ಕರ್ನಾಟಕ ವಿಧಾನ ಪರಿಷತ್‍ನ ಕಾಂಗ್ರೆಸ್ ಸದಸ್ಯರೊಬ್ಬರ ಆಪ್ತ ಸಹಾಯಕನಾಗಿದ್ದ. ಈತ ಎರಡೂ ಪ್ರಕರಣ ಶೂಟರ್‍ಗಳಿಗೆ ಬಂದೂಕು ತರಬೇತಿ ನೀಡಿದ್ದ. ಅಂಧೂರೆ ಮತ್ತು ಶರದ್ ಕಾಳಸ್ಕರ್ ಸೇರಿ ಡಾ.ದಾಭೋಲ್ಕರ್ ಅವರನ್ನು ಹತ್ಯೆ ಮಾಡಿದ್ದಾರೆ” ಎಂದು ಸಿಬಿಐ ವಕೀಲ ವಿಜಯಕುಮಾರ್ ಧಕನ್ ನ್ಯಾಯಾಲಯಕ್ಕೆ ತಿಳಿಸಿದರು.
ದಾಭೋಲ್ಕರ್ ಹತ್ಯೆ ಸಂಚಿನಲ್ಲೂ ಶಾಮೀಲಾಗಿರುವ ಬಂಗೇರನನ್ನು ಸಿಬಿಐ ತನಿಖೆಗೆ ಗುರಿಪಡಿಸಬೇಕಿದೆ. ಎಲ್ಲಿ ತರಬೇತಿ ನೀಡಲಾಗಿದೆ ಹಾಗೂ ಎಲ್ಲಿಂದ ಈ ಶಸ್ತ್ರಾಸ್ತ್ರಗಳು ಸಿಕ್ಕಿದ್ದವು ಹಾಗೂ ಶಸ್ತ್ರಾಸ್ತ್ರಗಳ ಪ್ರಸ್ತುತ ಚಲನ ವಲನಗಳ ಬಗ್ಗೆ ವಿಚಾರಣೆ ನಡೆಸಬೇಕಿದೆ ಎಂದು ವಕೀಲರು ಹೇಳಿದರು.