ಹೆಜಮಾಡಿ ಒಳರಸ್ತೆಯಲ್ಲಿ ಟೋಲ್: ಬಸ್ ಚಾಲಕರಿಂದ ದಿಢೀರ್ ಪ್ರತಿಭಟನೆ

Update: 2018-09-02 08:28 GMT

ಪಡುಬಿದ್ರೆ, ಸೆ. 2: ಹೆಜಮಾಡಿಯ ಹಳೆ ಎಂಬಿಸಿ ರಸ್ತೆಗೆ ಟೋಲ್‌ಗೇಟ್ ಅಳವಡಿಸಿರುವುದನ್ನು ಸರ್ವೀಸ್ ಬಸ್ಸಿನವರು ವಿರೋಧ ವ್ಯಕ್ತಪಡಿಸಿದ್ದು, ದಿಢೀರನೆ ಎರಡು ಗಂಟೆಗಳ ಕಾಲ ಬಸ್ ಸಂಚಾರ ತಡೆದ ಘಟನೆ ರವಿವಾರ ನಡೆದಿದೆ.

ನವಯುಗ ಕಂಪೆನಿ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಬಸ್ತಿಪಡ್ಪು ಕ್ರೀಡಾಂಗಣದ ಬಳಿ ಟೋಲ್ ಸಂಗ್ರಹ ಕೇಂದ್ರ ಆರಂಭಿಸಿದೆ. ಆದರೆ ಇದರಿಂದ ಹೆಚ್ಚಿನ ವಾಹನಗಳು ಟೋಲ್ ತಪ್ಪಿಸಲು ಹೆಜಮಾಡಿಯ ಹಳೆ ಎಂಬಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈ ಬಗ್ಗೆ ಅರಿತ ಗುತ್ತಿಗೆದಾರ ನವಯುಗ ಕಂಪೆನಿ ಹೆಜಮಾಡಿ ಗುಡ್ಡೆಯಂಗಡಿ ಬಳಿ ಒಳರಸ್ತೆಗೂ ಟೋಲ್ ಸಂಗ್ರಹಕ್ಕೆ ಮುಂದಾಗಿತ್ತು.

ಶನಿವಾರ ಟೋಲ್ ಸಂಗ್ರಹ ಆರಂಭಿಸಿತ್ತು ಎನ್ನಲಾಗಿದ್ದು, ರವಿವಾರ ಬೆಳಗ್ಗೆಯಿಂದ ಈ ರಸ್ತೆಯಲ್ಲಿ ಸಂಚರಿಸುವ ಸರ್ವಿಸ್ ಬಸ್ಸುಗಳು ಟೋಲ್‌ಗೆ ವಿರೋಧ ವ್ಯಕ್ತಪಡಿಸಿ ಏಕಾಏಕಿ ಟೋಲ್ ಬಳಿ ಬಸ್ಸುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಸುಮರು 2ಗಂಟೆಯವರೆಗೆ ಪ್ರತಿಭಟನೆ ಮುಂದುವರಿಯಿತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾತುಕತೆ ನಡೆಸಿ ಎರಡು ದಿನಗಳ ಕಾಲ ಸರ್ವಿಸ್ ಬಸ್ಸುಗಳಿಗೆ ಟೋಲ್‌  ವಿನಾಯಿತಿ ನೀಡಲಾಯಿತು. ಎರಡು ದಿನಗಳ ಬಳಿಕ ಮಾತುಕತೆ ನಡೆಸಲು ಪೊಲೀಸರು ತಿಳಿಸಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.

ಸ್ಥಳೀರಿಂದ ಪ್ರತಿಭಟನೆ

ಬಳಿಕ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಹೆಜಮಾಡಿ ಹಳೆ ಎಂಬಿಸಿ ರಸ್ತೆಗೆ ಟೋಲ್ ಅಳವಡಿಸಿರುವ ಕ್ರಮವನ್ನು ವಿರೋಧಿಸಿದರು. ಯಾವುದೇ ಪೂರ್ವ ತಯಾರಿ ಇಲ್ಲದೆ ಟೋಲ್ ಸಂಗ್ರಹಕ್ಕೆ ಆರಂಭಿಸಲಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿದೆ. ಗ್ರಾಮ ಪಂಚಾಯತ್ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಏಕಾಏಕಿ ಟೋಲ್‌ಗೆ ಮುಂದಾಗುವುದು ಸರಿಯಲ್ಲ. ಈ ತಿಂಗಳಾಂತ್ಯದಲ್ಲಿ ಜಿಲ್ಲಾಧಿಕಾರಿ ನೇತೃತ್ವ ದಲ್ಲಿ ಸಭೆ ನಡೆಯಲಿದ್ದು, ಅದುವರೆಗೂ ಟೋಲ್ ಆರಂಭಿಸುವುದು ಬೇಡ ಎಂದು ಪಟ್ಟುಹಿಡಿದರು.

ನವಯುಗ್ ಕಂಪನಿಯು ಹೆಜಮಾಡಿ ಹೆದ್ದಾರಿಯಲ್ಲಿ ಟೋಲ್ ಪ್ಲಾಝಾ ಆರಂಭಿಸಿದ ಬಳಿಕ ಹಲವು ವಾಹನಗಳು ಹೆಜಮಾಡಿ ಒಳ ರಸ್ತೆಯಲ್ಲಿ ನಿರಂತರ ಚಲಿಸಿದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಒಂದು ಕಿರು ಸೇತುವೆಯೂ ಮುರಿದಿದೆ. ಹಾಗಾಗಿ ಒಳ ರಸ್ತೆಗೆ ಟೋಲ್ ಪ್ಲಾಝಾ ನಿರ್ಮಿಸಿದ್ದು ಅತ್ಯುತ್ತಮ ನಿರ್ಧಾರವೆಂದು ಹಲವರು ಅಭಿಪ್ರಾಯಿಸಿದ್ದಾರೆ.

ಸ್ಥಳೀಯ ಬಸ್, ಶಾಲಾ ಬಸ್ ಹಾಗೂ ಗೂಡ್ಸ್ ವಾಹನಗಳು ಹೆಜಮಾಡಿಗೆ ಬರುವ ಕಾರಣ ಅವುಗಳಿಗೆ ಟೋಲ್ ಪ್ಲಾಝಾದಿಂದ ತೀವ್ರ ತೊಂದರೆಯಾಗಲಿದ್ದು ಅವುಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತದ ಆದೇಶದಂತೆ ಪೊಲೀಸರ ಸಹಕಾರದೊಂದಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೆಜಮಾಡಿಯ ಒಳ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದು, ನವಯುಗ್ ಕಂಪನಿಯು ಟೋಲ್ ಸಂಗ್ರಹಿಸುವಂತಿಲ್ಲ ಈ ಬಗ್ಗೆ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News