ನಿಮಗೆ ಗೊತ್ತೇ ? ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಶ್ರೀಮಂತ ದೇಶಗಳಿಗಿಂತಲೂ ದುಬಾರಿ

Update: 2018-09-02 08:17 GMT

ಹೊಸದಿಲ್ಲಿ, ಸೆ. 2: ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಇತರ ಏಳು ಏಷ್ಯನ್ ದೇಶಗಳಿಗೆ ಹೋಲಿಸಿದರೆ ದುಬಾರಿ ಎನ್ನುವುದು ನಿಮಗೆ ಗೊತ್ತೇ ? ಭಾರತಕ್ಕಿಂತ ಐದೂವರೆ ಪಟ್ಟು ತಲಾದಾಯ ಹೊಂದಿರುವ ದಕ್ಷಿಣ ಕೊರಿಯಾದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಆಗುವ ವೆಚ್ಚಕ್ಕಿಂತಲೂ ಭಾರತದಲ್ಲಿ ದುಬಾರಿ ಎನ್ನುವುದು ಈ ದೇಶಗಳ ವೆಚ್ಚವನ್ನು ತುಲನೆ ಮಾಡಿದಾಗ ತಿಳಿದುಬರುತ್ತದೆ.

ಈ ವೆಚ್ಚದ ಅಂಕಿ ಅಂಶ ಪಿಪಿಪಿ (ಪರ್ಚೇಸಿಂಗ್ ಪವರ್ ಪ್ಯಾರಿಟಿ) ಡಾಲರ್‌ನಲ್ಲಿದ್ದು, ಭಾರತದ 50 ಆಸ್ಪತ್ರೆಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಎಲ್ಲ ಆಸ್ಪತ್ರೆಗಳ ಸರಾಸರಿ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. 2011ರಿಂದ 2014ರ ಅವಧಿಯಲ್ಲಿ ಈ ಅಧ್ಯಯನ ನಡೆದಿದ್ದು, ಸಿಂಗಾಪುರ ಹೊರತುಪಡಿಸಿದರೆ ಆ್ಯಂಜಿಯೊಪ್ಲಾಸ್ಟಿ ವೆಚ್ಚ ಭಾರತದಲ್ಲಿ ಅತ್ಯಧಿಕ. ಅದರೆ 2017ರಲ್ಲಿ ಭಾರತ ಹೃದಯ ಸ್ಟೆಂಟ್‌ಗಳ ಬೆಲೆಯ ಮೇಲೆ ಗರಿಷ್ಠ ಮಿತಿ ನಿಗದಿಪಡಿಸಿದೆ. ಭಾರತದಲ್ಲಿ ಹೃದಯ ಚಿಕಿತ್ಸೆ ಚೀನಾ ಹಾಗೂ ಥಾಯ್ಲೆಂಡ್‌ಗೆ ಹೋಲಿಸಿದರೆ ಅಗ್ಗವಾದರೂ, ದಕ್ಷಿಣ ಕೊರಿಯಾ ಹಾಗೂ ವಿಯೇಟ್ನಾಂಗೆ ಹೋಲಿಸಿದರೆ ದುಬಾರಿ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ. ಆದರೆ ಚೀನಾ ಹಾಗೂ ಥಾಯ್ಲೆಂಡಿನ ತಲಾದಾಯ ಭಾರತಕ್ಕಿಂತ ಎರಡೂವರೆ ಪಟ್ಟು ಅಧಿಕ. ದಕ್ಷಿಣ ಕೊರಿಯಾದ ತಲಾದಾಯ ಭಾರತದ 5.4 ಪಟ್ಟು ಇದ್ದು, ವಿಯೇಟ್ನಾಂ ತಲಾದಾಯ ಭಾರತದ ತಲಾದಾಯಕ್ಕೆ ಸಮ. ಆದ್ದರಿಂದ ವಿಯೇಟ್ನಾಂ ಹೊರತುಪಡಿಸಿ ಉಳಿದೆಲ್ಲ ದೇಶಗಳ ಜನತೆಗೆ ವೆಚ್ಚ ಮಾಡುವ ಸಾಮರ್ಥ್ಯ ಭಾರತಕ್ಕಿಂತ ಅಧಿಕ.

ಚೀನಾದಲ್ಲಿ ಬಹುತೇಕ ಹೃದಯ ಚಿಕಿತ್ಸಾ ವೆಚ್ಚಗಳು ಭಾರತಕ್ಕೆ ಹೋಲಿಸಿದರೆ ಶೇಕಡ 13-25ರಷ್ಟು ಅಧಿಕ. ಶೇಕಡ 6ರಷ್ಟು ಮಾತ್ರ ಖಾಸಗಿ ಆಸ್ಪತ್ರೆಗಳಿರುವ ವಿಯೇಟ್ನಾಂನಲ್ಲಿ ಬೈಪಾಸ್ ಸರ್ಜರಿ ಹೊರತುಪಡಿಸಿದರೆ, ಉಳಿದೆಲ್ಲ ಚಿಕಿತ್ಸೆ ಭಾರತಕ್ಕಿಂತ ಅಗ್ಗ. ಈ ಅಧ್ಯಯನ ವರದಿಯನ್ನು ಬಿಎಂಸಿ ಕಾರ್ಡಿಯೊವ್ಯಾಸ್ಕುಲರ್ ಡಿಸಾರ್ಡರ್ ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಇಸಿಇ, ಕಾರ್ಡಿಕ್ ಮಾರ್ಕರ್, ಎಕೋಕಾರ್ಡಿಯಾಲಜಿ, ಆ್ಯಂಜಿಯೊಗ್ರಫಿ, ಆ್ಯಂಜಿಯೊಪ್ಲಾಸ್ಟಿ, ಬೈಪಾಸ್ ಸರ್ಜರಿ ಮತ್ತು ಹೃದಯ ಕಾಯಿಲೆಗಳ ತೀವ್ರ ನಿಗಾ ಘಟಕದಲ್ಲಿ ಒಂದು ದಿನದ ವಾಸ್ತವ್ಯ ವೆಚ್ಚವನ್ನು ತುಲನೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News