ರೋಬೊಟ್ ಡೈನೊಸಾರಸ್‌ಗಳಿಂದ ಸೇವೆ ಪಡೆಯಬೇಕೇ? ಹಾಗಿದ್ದರೆ ಈ ಹೋಟೆಲ್‌ಗೆ ಭೇಟಿ ನೀಡಿ

Update: 2018-09-02 13:19 GMT

ಜಪಾನಿನ ಟೋಕಿಯೊದಲ್ಲಿರುವ ಹೆನ್ ನಾ ಹೋಟೆಲ್ ಗ್ರಾಹಕರು ಒಳಗಡಿಯಿಟ್ಟಾಗ ಅದ್ಭುತ ಅನುಭವವನ್ನು ಪಡೆಯುತ್ತಾರೆ. ಇದು ರೋಬೊಟ್‌ಗಳೇ ನಿರ್ವಹಿಸುತ್ತಿರುವ ಜಗತ್ತಿನ ಮೊದಲ ಹೋಟೆಲ್‌ಗಳಲ್ಲೊಂದಾಗಿದೆ.

ಹೋಟೆಲ್‌ನಲ್ಲಿ ಗ್ರಾಹಕರು ಅಡಿಯಿಟ್ಟ ತಕ್ಷಣ ಸ್ವಾಗತದ ಉಸ್ತುವಾರಿಯನ್ನು ಹೊತ್ತಿರುವ ರಿಸೆಪ್ಶನಿಸ್ಟ್ ಅಂದರೆ ರೋಬೊಟ್ ಡೈನೊಸಾರಸ್‌ನಲ್ಲಿ ಅಳವಡಿಸಿರುವ ಸೆನ್ಸರ್‌ಗಳು ಅವರ ಆಗಮನವನ್ನು ಗ್ರಹಿಸುತ್ತವೆ ಮತ್ತು ಅದು ‘ವೆಲ್‌ಕಮ್’ ಹೇಳುವ ಮೂಲಕ ಅವರನ್ನು ಸ್ವಾಗತಿಸುತ್ತದೆ. ಟ್ಯಾಬ್ಲೆಟ್ ಸಿಸ್ಟಮ್‌ನ ಮೂಲಕ ರೋಬೊ ಡೈನೊ ಗ್ರಾಹಕರು ಬಯಸಿದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಬಹುಭಾಷಾ ವಿಶಾರದ ಡೈನೊಗಳೊಂದಿಗೆ ಸಂಭಾಷಿಸಲು ಜಪಾನಿ,ಇಂಗ್ಲಿಷ್,ಚೈನೀಸ್ ಮತ್ತು ಕೊರಿಯನ್ ಭಾಷೆಗಳನ್ನು ಈ ಹೋಟೆಲ್‌ನಲ್ಲಿ ಲಭ್ಯವಾಗಿಸಲಾಗಿದೆ.

ಈ ಹೋಟೆಲ್‌ನ ಪ್ರತಿಯೊಂದು ಕೋಣೆಯಲ್ಲಿಯೂ ಸ್ಟಾರ್‌ವಾರ್ಸ್‌ನಲ್ಲಿಯ ಬಿಬಿ-8ನ್ನು ಹೋಲುವ ಮಿನಿ ರೋಬೊಟ್‌ಗಳನ್ನು ಗ್ರಾಹಕರ ಸೇವೆಗಾಗಿ ನಿಯೋಜಿಸಲಾಗಿದ್ದು,ಅವು ಟಿವಿ ಚಾನೆಲ್‌ಗಳನ್ನು ಬದಲಿಸುವುದರಿಂದ ಹಿಡಿದು ಸಂಗೀತವನ್ನು ಕೇಳಿಸುವವರೆಗೆ ಎಲ್ಲ ಕಾರ್ಯಗಳಲ್ಲಿ ಗ್ರಾಹಕರಿಗೆ ನೆರವಾಗುತ್ತವೆ.

ಹೋಟೆಲ್‌ನ ಲಾಬಿಯಲ್ಲಿರುವ ಅಕ್ವೇರಿಯಮ್‌ನಲ್ಲಿರುವ ಮೀನುಗಳು ಕೂಡ ಬ್ಯಾಟರಿ ಚಾಲಿತವಾಗಿವೆ. ಅವುಗಳಿಗೆ ಅಳವಡಿಸಿರುವ ವಿದ್ಯುತ್ ಬಲ್ಬ್‌ಗಳು ಅವು ಈಜಾಡುತ್ತಿದ್ದಾಗ ಮಿನುಗುತ್ತ ಸುಂದರ ನೋಟವನ್ನು ನೀಡುತ್ತವೆ.

ಮೊದಲ ಹೆನ್ ನಾ ಹೋಟೆಲ್ 2015ರಲ್ಲಿ ನಾಗಾಸಾಕಿಯಲ್ಲಿ ಆರಂಭಗೊಂಡಿದ್ದು,ರೋಬೊಟ್‌ಗಳನ್ನು ಸಿಬ್ಬಂದಿಗಳಾಗಿ ಹೊಂದಿರುವ ವಿಶ್ವದ ಮೊದಲ ಹೋಟೆಲ್ ಎಂದು ಗಿನ್ನೆಸ ವಿಶ್ವದಾಖಲೆಗಳಲ್ಲಿ ಸೇರಿದೆ.

ಹೆನ್ ನಾ ಹೋಟೆಲ್ ಸರಣಿಯನ್ನು ನಡೆಸುತ್ತಿರುವ ಟ್ರಾವೆಲ್ ಏಜೆನ್ಸಿಯು ಜಪಾನಿನಾದ್ಯಂತ ಇಂತಹ ಎಂಟು ಹೋಟೆಲ್‌ಗಳನ್ನು ಹೊಂದಿದ್ದು,ಎಲ್ಲ ಹೋಟೆಲ್‌ಗಳಲ್ಲಿಯೂ ರೋಬೊಟ್‌ಗಳೇ ಸಿಬ್ಬಂದಿಗಳ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಕೆಲವು ಡೈನೊಸಾರಸ್‌ಗಳಾಗಿದ್ದರೆ ಹೆಚ್ಚಿನವು ಮಾನವರೂಪವನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News