ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುದ್ದುಕೃಷ್ಣ ಸ್ಪರ್ಧೆ: ಅಷ್ಟಮಿಯ ರಂಗು ಹೆಚ್ಚಿಸಿದ ಕೃಷ್ಣ ವೇಷಧಾರಿ ಪುಟಾಣಿಗಳು

Update: 2018-09-02 12:49 GMT

ಉಡುಪಿ, ಸೆ.2: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠ ದಲ್ಲಿ ಇಂದು ನಡೆದ ಮುದ್ದುಕೃಷ್ಣ, ಬಾಲಕೃಷ್ಣ ಹಾಗೂ ಕಿಶೋರ ಕೃಷ್ಣ ಸ್ಪರ್ಧೆಗಳು ಅಷ್ಟಮಿಯ ರಂಗನ್ನು ಹೆಚ್ಚಿಸಿದ್ದು, ಮುದ್ದು ಮಕ್ಕಳ ಕೃಷ್ಣನ ವಿವಿಧ ವೇಷಗಳು ಕಣ್ಮನ ಸೆಳೆದವು.

ಮಠದ ರಾಜಾಂಗಣದಲ್ಲಿ ನಡೆದ ಮೂರು ವರ್ಷದೊಳಗಿನ ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಸುಮಾರು 250 ಮಕ್ಕಳು ಭಾಗವಹಿಸಿದ್ದರು. ತಾಯಂದಿರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸುವ ದೃಶ್ಯ ರಾಜಾಂಗಣದಲ್ಲಿ ಕಂಡು ಬಂದವು. ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ರಾಜಾಂಗಣಕ್ಕೆ ಆಗಮಿಸಿ ಸ್ಪರ್ಧೆಯನ್ನು ವೀಕ್ಷಿಸಿದರು. ಬಳಿಕ ಎಲ್ಲ ಸ್ಪರ್ಧಾಳು ಮಕ್ಕಳೊಂದಿಗೆ ಕುಳಿತು ಫೋಟೋ ತೆಗೆಸಿಕೊಂಡರು.

ಮಧ್ವಂಗಣದಲ್ಲಿ ನಡೆದ ಮೂರರಿಂದ ಐದೂವರೆ ವರ್ಷದೊಳಗಿನ ಮಕ್ಕಳ ಬಾಲಕೃಷ್ಣ ಸ್ಪರ್ಧೆಯಲ್ಲಿ ಸುಮಾರಕು 100ರಿಂದ 150 ಮಕ್ಕಳು ಪಾಲ್ಗೊಂಡಿ ದ್ದರು. ಗೋವರ್ಧನ ಕೃಷ್ಣ, ಶ್ರೀಕೃಷ್ಣನ ಬಾಲಲೀಲೆ, ದನ ಮೇಯಿಸುವ ಗೋಪಾಲಕ, ಬೆಣ್ಣೆ ಕದಿಯುವ ಮುಕುಂದ, ಕೊಳಲು ಊದುವ ಕೃಷ್ಣ, ಕಾಳಿಂಗ ಮರ್ಧನ ಕೃಷ್ಣ ಹೀಗೆ ಮಕ್ಕಳ ನಾನಾ ವೇಷಗಳು ಆಕರ್ಷಣೀಯವಾಗಿದ್ದವು.

ಐದೂವರೆ ವರ್ಷದಿಂದ ಎಂಟು ವರ್ಷದೊಳಗಿನ ಮಕ್ಕಳಿಗೆ ಅನ್ನಬಹ್ಮ ಸಭಾಂಗಣದಲ್ಲಿ ಏರ್ಪಡಿಸಲಾದ ಕಿಶೋರ ಕೃಷ್ಣ ಸ್ಪರ್ಧೆಯಲ್ಲಿ ಸುಮಾರು 41 ಸ್ಪರ್ಧಿಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ತುಳಸಿ ಅರ್ಚನೆಗೊಂಡ ಮುದ್ದುಕೃಷ್ಣನಾಗಿ ಕಾಣಿಸಿಕೊಂಡ ಪುಟಾಣಿಯೊಂದು ಎಲ್ಲರ ಗಮನ ಸೆಳೆಯಿತು. ಸ್ಪರ್ಧೆಗಳನ್ನು ವೀಕ್ಷಿಸಲು ಮೂರು ಸಭಾಂಗಣದಲ್ಲಿ ಸಾಕ್ಟು ಸಂಖ್ಯೆಯಲ್ಲಿ ಜನ ನೆರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News