ಸಂಶೋಧನೆಗಳಿಂದ ತೆಂಗಿನ ವೌಲ್ಯವರ್ಧನೆ ಹೆಚ್ಚಳ: ಕೆ.ಬಿ.ಹೆಬ್ಬಾರ್

Update: 2018-09-02 13:03 GMT

ಕುಂದಾಪುರ, ಸೆ.2: ದೇಶದಲ್ಲಿ ತೆಂಗಿನ ವೌಲ್ಯವರ್ಧನೆ ಅಗತ್ಯವಾಗಿದ್ದು, ಅದರ ಹೆಚ್ಚಳಕ್ಕೆ ಹೊಸ ಹೊಸ ಸಂಶೋಧನೆಗಳನ್ನು ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆಂದು ಕಾಸರಗೋಡಿನ ಸೆಂಟ್ರಲ್ ಫ್ಲಾಂಟೇಶನ್ ಕ್ರೋಪ್ಸ್ ರಿಸರ್ಚ್ ಇಸ್ಟಿಟ್ಯೂಟ್‌ನ ವಿಜ್ಞಾನಿ ಕೆ.ಬಿ.ಹೆಬ್ಬಾರ್ ತಿಳಿಸಿದ್ದಾರೆ.

ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರು, ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್, ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಕುಂದಾಪುರ ಹಂಗಳೂರಿನ ಶ್ರೀಅನಂತಪದ್ಮನಾಭ ಸಭಾಗೃಹದಲ್ಲಿ ಆಯೋಜಿಸಲಾದ ವಿಶ್ವ ತೆಂಗು ದಿನಾ ಚರಣೆಯಲ್ಲಿ ಅವರು ಮಾತನಾಡುತಿದ್ದರು.

ಉತ್ತಮ ಆರೋಗ್ಯ, ಆಹಾರ ಹಾಗೂ ಆರ್ಥಿಕತೆಯಲ್ಲಿ ತೆಂಗುವಿನ ಪಾತ್ರ ಮಹತ್ತರವಾಗಿದೆ. ಶುದ್ಧ ತೆಂಗಿನೆಣ್ಣೆಗೆ ಜಗತ್ತಿನ ಎಲ್ಲ ಕಡೆಗಳಲ್ಲಿ ಉತ್ತಮ ಬೇಡಿಕೆ ಇದೆ. ತೆಂಗಿನ ವೌಲ್ಯವರ್ಧನೆ ಹೆಚ್ಚಿಸುವ ನಿಟ್ಟಿನಲ್ಲಿ ತೆಂಗಿನಿಂದ ಬೇರೆ ಬೇರೆ ಉತ್ಪನ್ನಗಳನ್ನು ತಂಾರಿಸುವ ಸಂಬಂಧ ಹಲವು ಸಂಶೋಧನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ ಮಾತನಾಡಿ, ಕರಾವಳಿಯಲ್ಲಿ ತೆಂಗು ಸೇರಿದಂತೆ ಎಲ್ಲ ಕೃಷಿ ಗಳಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರು ಸಂಕಟ ಅನುಭವಿಸುತ್ತಿದ್ದಾರೆ. ಆದುರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬೇಕಾದ ಅತ್ಯ ಇದೆ ಎಂದು ಅಭಿಪ್ರಾಯಪಟ್ಟರು.

ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್‌ನ ಸತ್ಯನಾರಾಯಣ ಉಡುಪ ಮಾತನಾಡಿ, ಕೇರಳಕ್ಕೆ ಹೋಲಿಸಿದರೆ ಕರ್ನಾಟಕ ದಲ್ಲಿ ತೆಂಗಿನ ಇಳುವರಿ ಸಾಕಷ್ಟು ಕಡಿಮೆ ಇದ್ದು, ಕೇರಳದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಕರ್ನಾಟಕ ರಾಜ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚು ತೆಂಗು ಬೆಳೆಯ ಲಾಗುತ್ತದೆ. ಕೇರಳದಲ್ಲಿ 7 ಸಾವಿರ ತೆಂಗಿನ ಉತ್ಪನ್ನದ ಕಂಪೆನಿಗಳಿದ್ದರೆ, ಕರ್ನಾಟಕದಲ್ಲಿ ಕೇವಲ 300 ಕಂಪೆನಿಗಳು ಮಾತ್ರ ಇವೆ ಎಂದರು.

ಕುಂದಾಪುರದಲ್ಲಿ ಹಮ್ಮಿಕೊಳ್ಳಲಾಗಿರುವ ತೆಂಗು ದಿನಾಚರಣೆಯು ಇಡೀ ದೇಶದಲ್ಲಿಯೇ ಮೂರನೆ ಕಾರ್ಯಕ್ರಮವಾಗಿದೆ. ಈ ಮೊದಲು ಛತ್ತೀಸ್‌ಗಡದ ರಾಯಗಢ ಹಾಗೂ ಅಂಡಮಾನ್‌ನಲ್ಲಿ ವಿಶ್ವ ತೆಂಗು ದಿನಾಚರಣೆಯನ್ನು ಆಚರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಹಿಸಿದ್ದರು. ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಹೇಮಚಂದ್ರ, ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಭುವನೇಶ್ವರಿ, ಕುಂದಾ ಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆೆಡರೇಶನ್ ಕಾರ್ಯದರ್ಶಿ ಸೀತಾರಾಮ ಗಾಣಿಗ, ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಅಧ್ಯಕ್ಷ ವೆಂಕಟೇಶ್ ರಾವ್ ಸ್ವಾಗತಿಸಿದರು. ತೋಟಗಾರಿಕಾ ಇಲಾಖೆಯ ಸಂಜೀವ ನಾಯ್ಕಾ ಕಾರ್ಯಕ್ರಮ ನಿರೂಪಿಸಿದರು. ಅವಿಭಜಿತ ದ.ಕ. ಜಿಲ್ಲೆಯ ನೂರಾರು ತೆಂಗು ಬೆಳೆಗಾರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಭಾರತವು ತೆಂಗಿನ ಉತ್ಪಾದನೆ ಮತ್ತು ಉತ್ಪಾದಕತೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಆದರೆ ತೆಂಗಿನ ಉತ್ಪನ್ನಗಳ ರಪ್ತಿನಲ್ಲಿ ದೇಶದ ಜಿಡಿಪಿಗೆ ಕೇವಲ ಶೇ.0.01ರಷ್ಟು ಮಾತ್ರ ಕೊಡುಗೆ ಇದೆ. ಇಂಡೋನೇಷ್ಯಾ, ಫಿಲಿಪೈನ್ಸ್, ಶ್ರೀಲಂಕಾ ದೇಶಗಳಲ್ಲಿ ತೆಂಗಿನ ಉತ್ಪನ್ನಗಳ ರಫ್ತಿನಿಂದ ಜಿಡಿಪಿಗೆ ಶೇ.5ರಷ್ಟು ಕೊಡುಗೆ ನೀಡುತ್ತಿದೆ ಎಂದು ವಿಜ್ಞಾನಿ ಕೆ.ಬಿ.ಹೆಬ್ಬಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News