ಕುಂದಾಪುರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ

Update: 2018-09-02 13:16 GMT

ಕುಂದಾಪುರ, ಸೆ.2: ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶವು ಸೆ.3ರಂದು ಪ್ರಕಟವಾಗಲಿದ್ದು, ಒಟ್ಟು 97 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ 261 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಮೂರು ಮತ ಎಣಿಕೆ ಕೇಂದ್ರಗಳಲ್ಲಿ ಸರ್ವ ಸಿದ್ಧತೆಗಳನ್ನು ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಉಡುಪಿ ನಗರಸಭೆಯ ಒಟ್ಟು 35ವಾರ್ಡ್‌ಗಳಲ್ಲಿ 91 ಮಂದಿ, ಕುಂದಾಪುರ ಪುರಸಭೆಯ ಒಟ್ಟು 23 ವಾರ್ಡ್‌ಗಳಲ್ಲಿ 68 ಮಂದಿ, ಕಾರ್ಕಳ ಪುರಸಭೆಯ ಒಟ್ಟು 23 ವಾರ್ಡ್‌ಗಳಲ್ಲಿ ಒಟ್ಟು 56 ಮಂದಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಒಟ್ಟು 16 ವಾರ್ಡ್‌ಗಳಲ್ಲಿ 46 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಉಡುಪಿ ನಗರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮತ ಎಣಿಕಾ ಕೇಂದ್ರ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪುರಸಭೆ ಮತ ಎಣಿಕೆ ಕೇಂದ್ರ ಕುಂದಾಪುರದ ಮಿನಿವಿಧಾನ ಸೌಧದ ತಾಲೂಕು ಕಚೇರಿ ಕೋರ್ಟ್ ಹಾಲ್ ಹಾಗೂ ಕಾರ್ಕಳ ಪುರಸಭೆಯ ಮತ ಎಣಿಕಾ ಕೇಂದ್ರ ಕಾರ್ಕಳ ಮಿನಿ ವಿಧಾನ ಸೌಧದ ತಾಲೂಕು ಕಚೇರಿ ಹಾಲ್‌ನಲ್ಲಿ ಎಲ್ಲ ಸಿದ್ಧತೆ ಗಳು ನಡೆಸಲಾಗಿವೆ.

ಉಡುಪಿ ನಗರಸಭೆಗೆ ಎಂಟು ಹಾಗೂ ಉಳಿದ ಮೂರು ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ ಮೂವರು ಚುನಾವಣಾಧಿಕಾರಿಗಳಿಗೆ ಎರಡರಂತೆ 6 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, 11 ಗಂಟೆ ಸುಮಾರಿಗೆ ಎಲ್ಲ ವಾರ್ಡಿನ ಫಲಿತಾಂಶ ಹೊರ ಬೀಳುವ ಸಾಧ್ಯತೆಯಿದೆ. ಒಟ್ಟು 4 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಂದು ಸುತ್ತಿನಲ್ಲಿ 6 ವಾರ್ಡ್‌ಗಳ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.

ಈ ಕೇಂದ್ರಗಳ ಸುತ್ತ ಈಗಾಗಲೇ ನಿಷೇಧಾಜ್ಞೆ ವಿಧಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸ ಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ವಾರ್ಡ್‌ನ ಅ್ಯರ್ಥಿ, ಏಜೆಂಟ್ ಅಥವಾ ಎಣಿಕೆ ಏಜೆಂಟ್ ಈ ಮೂವರಲ್ಲಿ ಒಬ್ಬರಿಗೆ ಮಾತ್ರ ಹೋಗಲು ಅವಕಾಶ ನೀಡಲಾಗಿದೆ. ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಲಾಗಿದೆ.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಶನಿವಾರ ಉಡುಪಿ ಹಾಗೂ ಕುಂದಾಪುರ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಮತ ಎಣಿಕಾ ಕೇಂದ್ರ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯ ಮೂರು ಮತ ಎಣಿಕಾ ಕೇಂದ್ರಗಳಲ್ಲಿ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಉಡುಪಿ ನಗರಸಭೆಯಲ್ಲಿ ಎಂಟು ಸೇರಿದಂತೆ ಉಳಿದ ಮೂರು ಸಂಸ್ಥೆಗಳಿಗೆ ತಲಾ ಆರು ಟೇಬಲ್‌ಗಳಲ್ಲಿ ಮತ ಎಣಿಕೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

-ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಉಡುಪಿ

ಜಿಲ್ಲೆಯ ಮೂರು ಮತಎಣಿಕಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಎರಡು ಕೆಎಸ್‌ಆರ್‌ಪಿ ಹಾಗೂ ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಮೂರು ಕೇಂದ್ರಗಳಿಗೆ ನಿಯೋಜಿಸಲಾಗಿದೆ.
-ಲಕ್ಷ್ಮಣ್ ಬಿ.ನಿಂಬರ್ಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News