ಇದು ನಿಜವಾದ ಪ್ರೀತಿಯಲ್ಲದಿದ್ದರೆ ಇನ್ಯಾವುದು ನಿಜವಾದ ಪ್ರೀತಿ....?

Update: 2018-09-02 13:53 GMT

ಯಾವುದೇ ಷರತ್ತುಗಳಿಲ್ಲದೆ ತನ್ನ ಸ್ನೇಹಿತನನ್ನು ಪ್ರೀತಿಸುತ್ತಿರುವ ಥೈಲಂಡ್‌ನ ಈ ಯುವತಿಯ ಕಥೆ ನಿಜವಾದ ಪ್ರೀತಿಗೆ ನಿದರ್ಶನವಾಗಿದೆ. ಸಂಗ್‌ಖ್ಲಾ ನಗರದ ನಿವಾಸಿ ಅತಿತ್ತಯಾ ಚಮ್‌ಕೀವ್ ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಸ್ನೇಹಿತನಿಗೆ ಬೆನ್ನಲುಬಾಗಿ ನಿಂತು ಪ್ರೀತಿಯನ್ನು ಮರುವ್ಯಾಖ್ಯಾನಿಸುತ್ತಿದ್ದಾಳೆ.

21ರ ಹರೆಯದ ಪೂಹ್ ಚೋಕ್‌ಚಾಯ್ ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದೀಗ ಅಂತಿಮ ಹಂತದಲ್ಲಿದೆ. ಕ್ಯಾನ್ಸರ್ ಆತನ ಇಡೀ ಮುಖವನ್ನು ಆವರಿಸಿಕೊಂಡಿದ್ದು,ನೋಡಲೂ ಭಯವಾಗುತ್ತದೆ. ಕ್ಯಾನ್ಸರ್‌ನಿಂದಾಗಿ ಪೂಹ್ ಮುಖ ವಿಕಾರಗೊಂಡಿದ್ದರೂ ಆತ ಅತಿತ್ತಯಾಳಂತಹ ಗೆಳತಿಯನ್ನು ಹೊಂದಿರುವ ಅದೃಷ್ಟವಂತನಾಗಿದ್ದಾನೆ. ಈ ಸಂಕಷ್ಟ ಸಮಯದಲ್ಲಿಯೂ ಆಕೆ ತನ್ನ ಪ್ರೇಮಿಗೆ ಬೆಂಬಲವಾಗಿ ನಿಂತಿದ್ದಾಳೆ. ಆತನ ಬದುಕಿನ ಕೊನೆಯ ದಿನಗಳನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ತನ್ನಿಂದ ಸಾಧ್ಯವಿರುವ ಪ್ರತಿಯೊಂದನ್ನೂ ಈ ಹುಡುಗಿ ಮಾಡುತ್ತಿದ್ದಾಳೆ.

 ‘ಮೂರನೇ ವಾರ್ಷಿಕೋತ್ಸವ.ನಮ್ಮಿಬ್ಬರ ಪ್ರೀತಿ ಇಂದಿಗೂ ಗಾಢವಾಗಿದೆ’ ಎಂಬ ಅಡಿಬರಹದೊಂದಿಗೆ ತಮ್ಮಿಬ್ಬರ ಫೋಟೊವನ್ನು ಅತಿತ್ತಯಾ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಬಳಿಕ ಈ ವಿಶಿಷ್ಟ ಪ್ರೇಮಕಥೆ ಬೆಳಕಿಗೆ ಬಂದಿದೆ. ಅತಿತ್ತಯಾ ಫೋಟೊವನ್ನು ಪೋಸ್ಟ್ ಮಾಡಿದ ಘಳಿಗೆಯಿಂದಲೇ ಅವರಿಬ್ಬರ ಪ್ರೇಮಕಥೆ ಭಾರೀ ಜನಪ್ರಿಯತೆ ಪಡೆದಿದ್ದು,ಆಕೆಯ ಪ್ರಯತ್ನಗಳಿಗೆ ಪ್ರಶಂಸೆಗಳು ಮುತ್ತು ಪೂಹ್ ಚೇತರಿಕೆಗೆ ಶುಭಹಾರೈಕೆಗಳು ಎಲ್ಲೆಡೆಗಳಿಂದ ಹರಿದುಬರುತ್ತಿವೆ.

 ರೇಡಿಯೊಥೆರಪಿ ಅಥವಾ ಕಿಮೊಥೆರಪಿ ಮೂಲಕ ರೋಗವನ್ನು ಗುಣಪಡಿಸುವ ಸಾಧ್ಯತೆಯನ್ನು ವೈದ್ಯರು ಕೈಚೆಲ್ಲಿದ್ದಾರೆ.ಆದರೂ ಪೂಹ್ ಕುಟುಂಬ ಮತ್ತು ಅತತ್ತಿಯಾ ಪವಾಡದ ನಿರೀಕ್ಷೆಯಲ್ಲಿದ್ದಾರೆ. ಪೂಹ್ ಮತ್ತೆ ಮೊದಲಿನಂತೆ ಆಗುತ್ತಾನೆ ಎನ್ನುವ ವಿಶ್ವಾಸ ಅತಿತ್ತಯಾಳದು.

ಈ ಗ ಹೇಳಿ,ಇದು ನಿಜವಾದ ಪ್ರೀತಿಯಲ್ಲದಿದ್ದರೆ ಇನ್ಯಾವುದು ನಿಜವಾದ ಪ್ರೀತಿ...?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News