ಶಿರೂರು: ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

Update: 2018-09-02 16:06 GMT

ಬೈಂದೂರು, ಸೆ.2: ಶಿರೂರು ಕೋಣದಮಕ್ಕಿ ಜಂಗಲ್‌ಕೀರ್ ದರ್ಗಾ ಸಮೀಪದ ಹೊಳೆಯಲ್ಲಿ ಈಜಲು ಬಂದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ. 2ರಂದು ಸಂಜೆ  ನಡೆದಿದೆ.

ಮೃತರನ್ನು ಭಟ್ಕಳದ ಖಾರ್ಗದ್ದೆ ನಿವಾಸಿ ಸತೀಶ್ ನಾಯ್ಕೆ ಎಂಬವರ ಮಗ ರಾಜು ನಾಯ್ಕೆ (35) ಹಾಗೂ ಇಮಾಮ್ ಸಾಹೇಬ್ ಎಂಬವರ ಮಗ ಝಮೀರ್ (22) ಎಂದು ಗುರುತಿಸಲಾಗಿದೆ. ಇವರಿಬ್ಬರು ನೆರೆಹೊರೆ ಮನೆಯವರಾಗಿದ್ದಾರೆ.

ಸ್ನೇಹಿತನೊಬ್ಬ ಹೊಸ ಬೈಕ್ ಖರೀದಿಸಿದ ಹಿನ್ನೆಲೆಯಲ್ಲಿ ಏಳು ಮಂದಿ ಗೆಳೆಯರ ತಂಡ ಪಾರ್ಟಿ ಮಾಡಲು ಶಿರೂರಿನ ಕೋಣದಮಕ್ಕಿ ಹೊಳೆ ಸಮೀಪಕ್ಕೆ ರಿಕ್ಷಾ ಹಾಗೂ ಬೈಕಿನಲ್ಲಿ ಇಂದು ಸಂಜೆ ಆಗಮಿಸಿದ್ದರು. ಅವರು ಬರುವಾಗ ರಾತ್ರಿಗೆ ಬೇಕಾದ ಊಟವನ್ನು ಕೂಡ ತಯಾರಿಸಿ ತಂದಿದ್ದರು.

ಈ ವೇಳೆ ರಾಜು ನಾಯ್ಕ ಈಜಲು ಹೊಳೆಗೆ ಇಳಿದರು. ಆಗ ನೀರಿನಲ್ಲಿ ಎದ್ದ ಸುಳಿಗೆ ಸಿಲುಕಿದ ರಾಜು ನೀರಿನಲ್ಲಿ ಮುಳುಗಲಾರಂಭಿಸಿದರು. ಇದನ್ನು ಕಂಡ ಝಮೀರ್ ಕೂಡಲೇ ನೀರಿಗೆ ಹಾರಿ ರಾಜುರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗದಿದ್ದಾಗ ಝಮೀರ್ ಕೂಡ ನೀರಲ್ಲಿ ಮುಳುಗಿ ದರು. ತಕ್ಷಣ ಅವರೊಂದಿಗೆ ಬಂದಿದ್ದ ಇತರ ಸ್ನೇಹಿತರು ಕೂಡ ನದಿಗೆ ಹಾರಿ ಇಬ್ಬರ ರಕ್ಷಣೆಗೆ ಪ್ರಯತ್ನಿಸಿದರು. ಆಗಲೇ ಅವರಿಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು.

ಬಳಿಕ ಶಿರೂರಿನ ಮೊಮಿನ್ ಆರೀಫ್, ಮೊಮಿನ್ ಇಸ್ಮಾಯಿಲ್, ಪಟ್ಗಾರ್ ಶಕೀಲ್, ಮುಹಮ್ಮದ್ ಮುಬೀನ್, ಮುಹಮ್ಮದ್ ರಶೀದ್, ಮುಹಮ್ಮದ್ ಫಹೀಖ್, ನೌಫಲ್ ಹೊಳೆಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದರು. ರಾಜು ನಾಯ್ಕಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಝಮೀರ್ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂದಿ ಆಗಮಿಸಿದರು. ಬಳಿಕ ಮೃತದೇಹವನ್ನು ಭಟ್ಕಳಕ್ಕೆ ಕೊಂಡೊಯ್ಯಲಾಯಿತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಾಯಕಾರಿ ಸ್ಥಳ

ಕೋಣದಮಕ್ಕಿ ಹೊಳೆ ಪ್ರದೇಶವು ಅಪಾಯಕಾರಿ ಸ್ಥಳವಾಗಿದ್ದು, ಮಳೆಗಾಲ ದಲ್ಲಿ ಇಲ್ಲಿ ಈಜುವುದು ಜೀವಕ್ಕೆ ಅಪಾಯ. ಈ ಹೊಳೆ ಮಧ್ಯದಲ್ಲಿಯೇ ದೊಡ್ಡ ಬಾವಿ ಇದ್ದು, ಇಲ್ಲಿ ಈಜಬಾರದೆಂದು ಎಚ್ಚರಿಕೆ ಫಲಕವನ್ನು ಕೂಡ ಹಾಕಲಾಗಿದೆ.

ಈ ಪ್ರದೇಶದಲ್ಲಿ ಈವರೆಗೆ ಈಜಲು ಬಂದ ಸುಮಾರು 10 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಸ್ಥಳೀಯರು ಹಾಗೂ 7 ಮಂದಿ ಹೊರಗಿನಿಂದ ಬಂದವರು ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News