ಚೋಕ್ಸಿಯ 1200 ಕೋಟಿಯ ಆಸ್ತಿಗಳು ಅಕ್ರಮ ವಹಿವಾಟಿನಿಂದ ಗಳಿಸಿದ್ದು: ಪಿಎಂಎಲ್‌ಎ ಪ್ರಾಧಿಕಾರ

Update: 2018-09-02 16:41 GMT

ಹೊಸದಿಲ್ಲಿ, ಸೆ.2: ಜಾರಿ ನಿರ್ದೇಶನಾಲಯ(ಇಡಿ)ವು ವಶಪಡಿಸಿಕೊಂಡಿರುವ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ಆತನ ಸಂಸ್ಥೆಗಳ ಹೆಸರುಗಳಲ್ಲಿರುವ 1,210 ಕೋ.ರೂ.ಮೌಲ್ಯದ 41 ಆಸ್ತಿಗಳು ಅಕ್ರಮ ಹಣ ವಹಿವಾಟುಗಳ ಮೂಲಕ ಗಳಿಸಿದ್ದ ಆಸ್ತಿಗಳಾಗಿದ್ದು,ಅವುಗಳ ಜಪ್ತಿ ಮುಂದುವರಿಯಬೇಕು ಎಂದು ನಿಯೋಜಿತ ಅಕ್ರಮ ಹಣ ವಹಿವಾಟು (ತಡೆ) ಕಾಯ್ದೆ(ಪಿಎಂಎಲ್‌ಎ)ಯಡಿ ನಿಯೋಜಿತ ಪ್ರಾಧಿಕಾರವು ಆದೇಶಿಸಿದೆ.

ಇಡಿಯು ಈ ವರ್ಷದ ಫೆಬ್ರವರಿಯಲ್ಲಿ ಮುಂಬೈನ ಪಿಎನ್‌ಬಿ ಶಾಖೆಯಲ್ಲಿನ ಎರಡು ಶತಕೋಟಿ ಡಾ.ವಂಚನೆಗೆ ಸಂಬಂಧಿಸಿದಂತೆ ಮುಂಬೈಯಲ್ಲಿನ 15 ಫ್ಲಾಟ್‌ಗಳು ಮತ್ತು 17 ಕಚೇರಿಗಳು,ಕೋಲ್ಕತಾದಲ್ಲಿನ ಒಂದು ಮಾಲ್, ಅಲಿಬಾಗ್‌ನಲ್ಲಿರುವ ನಾಲ್ಕು ಎಕರೆಗಳ ತೋಟದ ಮನೆ ಮತ್ತು ನಾಸಿಕ,ನಾಗ್ಪುರ, ಪನ್ವೇಲ್ ಮತ್ತು ತಮಿಳುನಾಡಿನ ವಿಲ್ಲುಪುರಮ್‌ಗಳಲ್ಲಿ ಒಟ್ಟು 231 ಎಕರೆ ಜಮೀನನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.

ಇಡಿಯ ಮೂಲದೂರಿನಲ್ಲಿರುವ ಮಾಹಿತಿಗಳನ್ನು ಪರಿಗಣಿಸಿ,ಈ ಸ್ಥಿರಾಸ್ತಿಗಳೆಲ್ಲ ಅಕ್ರಮ ಹಣ ವಹಿವಾಟಿನೊಂದಿಗೆ ಗುರುತಿಸಿಕೊಂಡಿವೆ ಎಂಬ ನಿರ್ಧಾರಕ್ಕೆ ತಾನು ಬಂದಿರುವುದಾಗಿ ಪಿಎಂಎಲ್‌ಎ ಪ್ರಾಧಿಕಾರದ ಸದಸ್ಯ ತುಷಾರ ವಿ.ಶಾ ಅವರು ಇತ್ತೀಚಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಾಧಿಕಾರವು ಅರೆ ನ್ಯಾಯಾಂಗ ಸಂಸ್ಥೆಯಾಗಿದ್ದು,ಪಿಎಂಎಲ್‌ಎ ಅಡಿ ಇಡಿಯು ವಶಪಡಿಸಿಕೊಂಡ ಆಸ್ತಿಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುತ್ತದೆ.

 ಇಡಿ ಈಗ ಈ ಆಸ್ತಿಗಳನ್ನು ಅಧಿಕೃತವಾಗಿ ವಶಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News