ಭಟ್ಕಳ: ಜೈನ ಬಸದಿ ಮೇಲ್ಛಾವಣಿ ಕುಸಿತ; ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

Update: 2018-09-02 17:18 GMT

ಭಟ್ಕಳ, ಸೆ. 2: ನಗರದ ಮಾರಿಗುಡಿ ರಸ್ತೆಯಲ್ಲಿನ ಪುರಾತನ ಜೈನ ಬಸದಿ ರವಿವಾರ ಮಧ್ಯಾಹ್ನ ಶಿಥಿಲಗೊಂಡ ಮೆಲ್ಚಾವಣಿ ಕುಸಿದು ಬಿದ್ದಿದ್ದು, ಘಟನೆಯಲ್ಲಿ  ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಮುಖವಾದ ಸ್ಮಾರಕಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಇಲಾಖೆಯ ನಿರ್ಲಕ್ಷ್ಯ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದರಿಂದ ಜೈನ ಬಸದಿಯ ಮೇಲ್ಚಾವಣಿ ಕುಸಿದು ಬಿದ್ದಿರುವದೇ ನೈಜ ಸಾಕ್ಷಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1556ರಲ್ಲಿ ಜಟ್ಟಪ್ಪ ನಾಯಕ ಜೈನ ಬಸದಿಯನ್ನು ಸ್ಥಾಪಿಸಿದ್ದು, 1958ರಲ್ಲಿ ಕೇಂದ್ರ ಸರ್ಕಾರ ಇದನ್ನು ಮಹತ್ವದ ಸ್ಮಾರಕವೆಂದು ಘೋಷಿಸಿತ್ತು. ಒಟ್ಟು ತಾಲೂಕಿನಲ್ಲಿ 18ಕ್ಕೂ ಹೆಚ್ಚು ಸ್ಮಾರಕಗಳಿದ್ದು ಇವೆಲ್ಲವೂ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಟ್ಟಿರುತ್ತದೆ. ಈ ಪೈಕಿ ಪ್ರಾಚೀನ ದೇಗುಲ, ಸ್ಮಾರಕಗಳನ್ನು ಉಳಿಸಿಕೊಳ್ಳುವಲ್ಲಿ ಇಲಾಖೆ ಎಡವುತ್ತಿದೆ ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಿದ್ದರ ಹಿನ್ನೆಲೆ ಮಹತ್ವದ ಸ್ಮಾರಕಗಳು ಶಿಥಿಲಾವಸ್ಥೆಗೆ ತಲುಪಿದೆ ಎನ್ನುವ ಆರೋಪಗಳು ಇಲ್ಲಿನ ಪ್ರಜ್ಞಾವಂತರದ್ದಾಗಿದೆ. ಮೇಲ್ಛಾವಣಿ ಕುಸಿಯುವ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.

ನಿಷೇಧಿತ ಪ್ರದೇಶ ಘೋಷಣೆ: 1958ರ ಅಡಿಯಲ್ಲಿ ಭಟ್ಕಳದ ಜೈನ ಬಸದಿಯನ್ನು ಮಹತ್ವದ ಸ್ಮಾರಕವೆಂದು ಸರ್ಕಾರ ಘೋಷಿಸಿದೆ. 2010ರ ತಿದ್ದುಪಡಿ ನಿಯಮ20-ಎ ಇದರ ಪ್ರಕಾರ ಸಂರಕ್ಷಿತ ಪ್ರದೇಶದಿಂದ 4 ದಿಕ್ಕುಗಳಲ್ಲಿಯೂ 100 ಮೀ. ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಈ ಕ್ಷೇತ್ರದಲ್ಲಿ ಕಡ್ಡಾಯವಾಗಿ ಯಾವುದೇ ಕಟ್ಟಡವನ್ನು ನಿರ್ಮಿಸುವಂತಿಲ್ಲ. ಆದರೆ ಬಸ್ತಿಯ ಅಕ್ಕಪಕ್ಕದಲ್ಲಿಯೇ ಬಹುಮಹಡಿಯ ಕಟ್ಟಡ ನಿರ್ಮಾಣವಾಗಿದ್ದು, ಇನ್ನು ಹಲವು ನಿರ್ಮಾಣ ಹಂತದಲ್ಲಿ ಇದೆ. ಇಲ್ಲಿ ಕಾನೂನು ಉಲ್ಲಂಘನೆಯಾಗಿದ್ದರು ಇಲಾಖೆ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News