ಕಾಶ್ಮೀರದ ವಿಷಯದಲ್ಲಿ ಕೇಂದ್ರದಿಂದ ಹಲವು ತಪ್ಪುಗಳು: ಫಾರೂಕ್ ಅಬ್ದುಲ್ಲಾ

Update: 2018-09-02 17:45 GMT

ಶ್ರೀನಗರ, ಸೆ.2: ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರಕಾರ ಹಲವು ತಪ್ಪುಗಳನ್ನು ಮಾಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದು , ರಾಜ್ಯದ ಜನರ ಹೃದಯವನ್ನು ಗೆಲ್ಲಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸಂವಿಧಾನದ 35-ಎ ವಿಧಿಯನ್ನು ರದ್ದುಗೊಳಿಸುವ ಮಾತನ್ನು ಎತ್ತಿದಾಗಲೆಲ್ಲಾ ರಾಜ್ಯದ ಜನತೆ ನೊಂದುಕೊಳ್ಳುತ್ತಾರೆ. ಜನತೆಯ ಹೃದಯವನ್ನು ಬೆಸೆಯುವ ಕಾರ್ಯ ಮಾಡಬಯಸುವವರು ಮೊದಲು ಜನತೆಯ ಹೃದಯವನ್ನು ಗೆಲ್ಲಬೇಕು. ಅದಿಲ್ಲದಿದ್ದರೆ ಗೆಲುವು ಪಡೆಯಲು ಸಾಧ್ಯವಿಲ್ಲ ಎಂದು ಅಬ್ದುಲ್ಲಾ ಹೇಳಿದರು. ಇಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಹಿಂಸಾಚಾರವನ್ನೇ ಜೀವನಾಧಾರವನ್ನಾಗಿಸಿಕೊಂಡವರು ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಬಾರದು ಎಂದು ಆಶಿಸುತ್ತಿದ್ದಾರೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಟೀಕಿಸಿದ ಅಬ್ದುಲ್ಲ, ಒಂದು ದಿನ ಕಾಶ್ಮೀರದ ಸಮಸ್ಯೆಯ ಬಗ್ಗೆ ನಿರ್ಧಾರಕ್ಕೆ ಬರಬಹುದು. ಆದರೆ ಅದುವರೆಗೆ, ನಮ್ಮ ಕಾಲ ಮೇಲೆ ನಿಲ್ಲಲು ನಾವು ಪ್ರಯತ್ನಿಸಬೇಕಾಗಿದೆ. ನಮ್ಮ ರಕ್ತವನ್ನೇ ನೆಚ್ಚಿಕೊಂಡು ಬದುಕುತ್ತಿರುವ ಶಕ್ತಿಗಳು ಇಲ್ಲಿ ಶಾಂತಿ ನೆಲೆಸಿರುವುದನ್ನು ಬಯಸಲಾರರು ಎಂದರು.

ಮುಂಬರುವ ಸ್ಥಳೀಯಾಡಳಿತ ಮತ್ತು ಪಂಚಾಯತ್ ಚುನಾವಣೆಗಳು ರಾಜ್ಯದ ಜನತೆಯ ಹಿತಾಸಕ್ತಿಗೆ ಪೂರಕವಾಗಿವೆ . ಭಾರತ ಬೇಕೇ ಅಥವಾ ಪಾಕಿಸ್ತಾನ ಬೇಕೇ ಎಂಬುದನ್ನು ನಿರ್ಧರಿಸುವ ಚುನಾವಣೆ ಇದಲ್ಲ, ತಮ್ಮ ಬದುಕನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜನತೆ ನಿರ್ಧಾರ ಕೈಗೊಂಡು, ತಮ್ಮ ಸಮಸ್ಯೆಗಳಿಗೆ ಧ್ವನಿಯಾಗಬಲ್ಲವರನ್ನು ಆರಿಸಬೇಕಾದ ಚುನಾವಣೆ ಇದು ಎಂದು ಅಬ್ದುಲ್ಲ ಹೇಳಿದರು. ಈಗ ರಾಜ್ಯದ ಹೋಟೆಲ್‌ಗಳು, ಹೌಸ್‌ಬೋಟ್‌ಗಳು ವ್ಯಾಪಾರವಿಲ್ಲದೆ ಸೊರಗಿವೆ. ಶಾಲೆ, ಕಾಲೇಜುಗಳು ಮುಚ್ಚಿವೆ. ವ್ಯಾಪಾರಿಗಳು ನಷ್ಟದ ಹಾದಿಯಲ್ಲಿದ್ದಾರೆ. ಇದರಿಂದ ನಷ್ಟ ಆಗುತ್ತಿರುವುದು ರಾಜ್ಯದ ಜನರಿಗೇ . ರಾಜ್ಯವನ್ನು ಸರ್ವನಾಶದ ಅಂಚಿಗೆ ಜಾರದಂತೆ ರಕ್ಷಿಸಬೇಕಿದೆ. ನಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ನಾವು ಯೋಚಿಸಬೇಕಿದೆ. ಮುಂದೊಂದು ದಿನ ನಮ್ಮ ರಾಜ್ಯದಲ್ಲಿ ಶಾಂತಿ ನೆಲೆಸಬಹುದು ಮತ್ತು ಪಾಕಿಸ್ತಾನ ಎಂದು ಕರೆಯಲಾಗುತ್ತಿರುವ ದೇಶದೊಡನೆ ಶಾಂತಿ ಸೌಹಾರ್ದತೆಯಿಂದ ಬದುಕಬಹುದು ಎಂಬ ಬಗ್ಗೆ ವಿಶ್ವಾಸವಿದೆ. ಆದರೆ ಅದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಪಂಚಾಯತ್ ಮತ್ತು ಸ್ಥಳೀಯಾಡಳಿತ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದು ಜನತೆಗೆ ಕಿವಿ ಮಾತು ಹೇಳಿದರು.

ರಾಜ್ಯದಲ್ಲಿ ಈಗ ನೆಲೆಸಿರುವ ಪರಿಸ್ಥಿತಿಯನ್ನು ಗಮನಿಸಿದರೆ, ಇದು ಚುನಾವಣೆ ನಡೆಸಲು ಯೋಗ್ಯ ಕಾಲ ಎಂದು ಅನಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರಿಯೋ ತಪ್ಪೋ ನನಗೆ ತಿಳಿಯದು. ಈಗ ಚುನಾವಣೆಯ ದಿನಾಂಕ ಘೋಷಿಸಿಯಾಗಿದೆ ಎಂದರು. ಜಮ್ಮು ಕಾಶ್ಮೀರದಲ್ಲಿ ಸ್ಥಳೀಯಾಡಳಿತ ಚುನಾವಣೆ ಅಕ್ಟೋಬರ್ 1ರಿಂದ 5ರವರೆಗೆ ನಾಲ್ಕು ಹಂತಗಳಲ್ಲಿ, ಪಂಚಾಯತ್ ಚುನಾವಣೆ ನವೆಂಬರ್ 8ರಿಂದ ಡಿಸೆಂಬರ್ 4ರವರೆಗೆ 8 ಹಂತಗಳಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News