ಫಲಾನುಭವಿಗಳ ದಾಖಲೆ ಅಪ್ಲೋಡ್‌ಗೆ ಅವಧಿ ವಿಸ್ತರಣೆ : ಸಚಿವ ಖಾದರ್

Update: 2018-09-03 13:25 GMT

ಮಂಗಳೂರು, ಸೆ.3: ರಾಜೀವಗಾಂಧಿ ವಸತಿ ನಿಗಮದ ಫಲಾನುಭವಿಗಳ ದಾಖಲೆ ಅಪ್ಲೋಡ್ ಮಾಡುವ ಅವಧಿಯನ್ನು ವಿಸ್ತರಿಸಲಾಗಿದೆ. ಈ ಹಿಂದೆ ವಿಧಿಸಿದ್ದ ಬ್ಲಾಕ್ (ನಿರ್ಬಂಧ) ಅನ್ನು ತೆರವುಗೊಳಿಸಿ ಸೆ.5ರಿಂದ 20 ತನಕ ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರ್ದಿಷ್ಟ ಕಾಲಾವಧಿಯಲ್ಲಿ ಮನೆ ಕಾಮಗಾರಿ ಆರಂಭಿಸದೆ ಯೋಜನೆ ಸೌಲಭ್ಯ ಪಡೆಯಲು ವಿಫಲರಾಗಿದ್ದ ರಾಜ್ಯದ ಸುಮಾರು 70 ಸಾವಿರ ಫಲಾನುಭವಿಗಳಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ವಸತಿ ಕಾಮಗಾರಿ ಆರಂಭಿಸಿದ ಬಗ್ಗೆ ಫೋಟೋ ಹಾಗೂ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಫಲಾನುಭವಿಗಳ ಅನುಮೋದನೆಯನ್ನು ಕಳೆದ ವರ್ಷ ರದ್ದುಪಡಿಸಲಾಗಿತ್ತು. ಅಲ್ಲದೆ ರದ್ದುಪಡಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಹೊಸ ಫಲಾನುಭವಿಗಳಿಗೆ ಅವಕಾಶ ಒದಗಿಸಲಾಗಿತ್ತು. ಇದರ ಅರಿವಿಲ್ಲದ ಹಳೇ ಫಲಾನುಭವಿಗಳು ತಡವಾಗಿ ಮನೆ ಕಾಮಗಾರಿ ಆರಂಭಿಸಿ ಫೋಟೋ ಅಪ್ಲೋಡ್ ಮಾಡಿದಾಗ ಅವರ ಹೆಸರು ಫಲಾನುಭವಿಗಳ ಪಟ್ಟಿಯಿಂದ ಕೈಬಿಟ್ಟಿವುದು ಗಮನಕ್ಕೆ ಬಂದಿದೆ. ಫೋಟೋ ಹಾಗೂ ಮಾಹಿತಿ ಅಪ್ಲೋಡ್ ಮಾಡುವ ವ್ಯವಸ್ಥೆಯೇ ಬ್ಲಾಕ್ ಆದ ಕಾರಣ ಸಮಸ್ಯೆಯಾಗಿತ್ತು. ಈ ಸಮಸ್ಯೆಯಿಂದ ಫಲಾನುಭವಿಗಳನ್ನು ಮುಕ್ತಿಗೊಳಿಸುವ ಸಲುವಾಗಿ ಬ್ಲಾಕ್ ಪ್ರಕ್ರಿಯೆ ತೆರವುಗೊಳಿಸಿ ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ ಎಂದು ಸಚಿವ ಖಾದರ್ ಹೇಳಿದರು.

ಈ ಹಿಂದೆ ವಸತಿ ಮಂಜೂರಾದ ಫಲಾನುಭವಿಗಳ ಆದಾಯಕ್ಕೆ ಇದ್ದ ಮಾನದಂಡದಿಂದ ಕೂಡ ವಿನಾಯಿತಿ ನೀಡಲಾಗಿದೆ. ಹೊಸ ಫಲಾನುಭವಿಗಳಿಗೆ ಕೂಡ ಆದಾಯ ಮಿತಿಯನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದೆ ಎಂದರು.

6 ತಿಂಗಳಲ್ಲಿ ವಸತಿ ಇ- ಆಡಳಿತ : ಮುಂದಿನ ಆರು ತಿಂಗಳಲ್ಲಿ ವಸತಿ ಇಲಾಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಇ- ಆಡಳಿತ ಅನುಷ್ಠಾನಗೊಳ್ಳಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪಕ್ಷದ ಮುಖಂಡರಾದ ಸಂತೋಷ್ ಶೆಟ್ಟಿ ಅಸೈಗೋಳಿ, ಈಶ್ವರ ಉಳ್ಳಾಲ, ಎನ್.ಎಸ್.ಕರೀಂ, ಯು.ಬಿ.ಸಲೀಂ, ಸಂತೋಷ್ ಶೆಟ್ಟಿ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.

ಸೌದಿಯಿಂದ ವಾಪಸ್: ಡಿಸಿ ಕಚೇರಿಯಲ್ಲಿ ನೋಂದಣಿ ಕೇಂದ್ರ

ಸೌದಿ ಅರೇಬಿಯಾ ಸರಕಾರದ ಹೊಸ ನೀತಿಯಿಂದ ಉದ್ಯೋಗ ಕಳೆದುಕೊಂಡು ವಾಪಸ್ ಬರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಕೇಂದ್ರ ತೆರೆಯಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
 

ಸೌದಿ ಅರೇಬಿಯಾದಿಂದ ಕೆಲಸವಿಲ್ಲದೆ ಮರಳಿ ಬರುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ನಿರುದ್ಯೋಗಿಗಳಾಗಿರುವ ಅವರಿಗೆ ಸೌಕರ್ಯ ಕಲ್ಪಿಸುವುದು ಸರಕಾರದ ಕರ್ತವ್ಯವಾಗಿದೆ. ಮೊದಲು ವಾಪಸ್ ಬಂದವರು ಯಾರು ಮತ್ತು ಎಷ್ಟು ಮಂದಿ ಇದ್ದಾರೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ನೋಂದಣಿ ಕೇಂದ್ರ ತೆರೆಯಲಾಗುವುದು. ವಾಪಸ್ ಬಂದವರು ಮೊದಲು ಅಲ್ಲಿ ಸವಿವರದೊಂದಿಗೆ ಹೆಸರು ನೋಂದಾಯಿಸಬೇಕು. ಬಳಿಕ ಅವರಿಗೆ ಸ್ವ ಉದ್ಯೋಗ ಮಾಡಲ ಸಾಲ ಸೌಲಭ್ಯದ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಮುಖ್ಯಮಂತ್ರಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
 

ಕರಾವಳಿಯ ದೊಡ್ಡ ಸಂಖ್ಯೆಯ ಜನರು ಉದ್ಯೋಗ ನಿಮಿತ್ತ ವಿದೇಶಗಳಲ್ಲಿ ನೆಲೆಸಿದ್ದಾರೆ. ಅದರಲ್ಲೂ ಸುಮಾರು ಶೇ.80 ಜನರು ತಳಮಟ್ಟದ ಕೆಲಸಗಳಲ್ಲಿ ತೊಡಗಿಕೊಂಡವರು. ಉದ್ಯೋಗ ಕಳೆದುಕೊಂಡು ವಾಪಸ್ ಆಗುವವರು ಈ ಕೇಂದ್ರದಲ್ಲಿ ಮಾಹಿತಿ ಒದಗಿಸಬೇಕು. ಆ ಮಾಹಿತಿ ಆಧರಿಸಿ ಸರಕಾರ ಸೂಕ್ತ ಕೈಗೊಳ್ಳಲಿದೆ ಎಂದ ಸಚಿವರು, ಉಡುಪಿಯಲ್ಲಿ ಇಂತಹ ಕೇಂದ್ರ ಆರಂಭಿಸುವ ಕುರಿತು ಅಲ್ಲಿನ ಉಸ್ತುವಾರಿ ಸಚಿವರ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News