ಮಾನವೀಯತೆಯನ್ನು ಮೈಗೂಡಿಸಿಕೊಂಡು ಬದುಕಿದಾಗ ದೇಶಕ್ಕೆ ಒಳಿತು: ಡಾ. ಡಿ ವೀರೇಂದ್ರ ಹೆಗ್ಗಡೆ

Update: 2018-09-03 13:38 GMT

ಬೆಳ್ತಂಗಡಿ, ಸೆ. 3: ದೇವರಲ್ಲಿ ಅಚಲವಾದ ನಂಬಿಕೆಯನ್ನು ಬೆಳೆಸಿಕೊಂಡು ಮೂಢ ನಂಬಿಕೆಗಳಿಂದ ದೂರವಾಗಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಧರ್ಮದ ಆಧಾರದಲ್ಲಿ ಎಲ್ಲರೂ ಬದುಕನ್ನು ನಡೆಸಿದಾಗ ದೇಶಕ್ಕೆ ಮಾನವಕುಲಕ್ಕೆ ಒಳಿತಾಗಲು ಸಾಧ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಶ್ರೀರಾಮಕ್ಷೇತ್ರ ಮಹಾ ಸಂಸ್ಥಾನಮ್ ಕನ್ಯಾಡಿಯ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಕಲ ಮಾನವ ಜನಾಂಗಕ್ಕೆ ಒಳಿತಾಗಲಿ ಎಂಬುದು ಧರ್ಮ ಸಂಸದ್‌ನ ಚಿಂತನೆಯಾಗಲಿ, ಧರ್ಮದ ತಳಹದಿಯಲ್ಲಿ ಪ್ರತಿಯೊಬ್ಬರೂ ಜೀವನ ನಡೆಸುವಂತಾದಾಗ ಅದು ಸಾಧ್ಯವಾಗುತ್ತದೆ. ಎಂದ ಅವರು ಕಲಿಗಾಲದಲ್ಲಿ ಆಗಿರುವುದೆಲ್ಲವೂ ಕೆಡುಕಲ್ಲ ಐದು ಸಾವಿರ ವರ್ಷಗಳ ಇತಿಹಾಸವನ್ನು ಗಮನಿಸಿದರೆ ಮಹಿಳೆಯರಿಗೆ ಸೇರಿದಂತೆ ಸಮಾಜದಲ್ಲಿ ಇಷ್ಟೊಂದು ಸಮಾನತೆ ದೊರೆತಿರುವುದು ಈಗಲೇ ಆಗಿದೆ ಎಂದರು. ಸಂಘಟಿತರಾದಾಗ ಅಪಾರವಾದ ಶಕ್ತಿ ಬರುತ್ತದೆ ಅದನ್ನು ದೇಶದ ಒಳಿತಿಗಾಗಿ ಉಪಯೋಗಿಸುವ ಕಾರ್ಯ ಆಗಬೇಕು ಎಂದರು.

ಆಶೀರ್ವಚನ ನೀಡಿದ ಧರ್ಮಸಂಸದ್‌ನ ರೂವಾರಿ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನಮ್ಮ ಶಿಕ್ಷಣ ನೀತಿಯಿಂದಾಗಿ ದೇಶದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಬ್ರಿಟೀಷರು ಬಿಟ್ಟು ಹೋಗಿರುವ ಶಿಕ್ಷಣಪದ್ದತಿಯನ್ನು ಬದಲಿಸಬೇಕಾಗಿದೆ, ನಮ್ಮ ಮಕ್ಕಳು ಯಾರದ್ದೋ ಇತಿಹಾಸವನ್ನು ಕಲಿಯುವ ಅಗತ್ಯವಿಲ್ಲ. ಅವರು ರಾಮಾಯಣ, ಮಹಾಭಾರತ, ವೇದ, ಉಪನಿಷತ್, ಭಗವದ್ಗೀತೆಗಳನ್ನು ಕಲಿಯುವ ಅಗತ್ಯವಿದೆ, ದೇಶದ ಸಂತರನ್ನು ಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರಗಳು ಒಂದು ಶಿಕ್ಷಣ ನೀತಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮಾತನಾಡಿ ಅವಕಾಶ ವಾದಿಗಳು ಸಮಾಜವನ್ನು ದಾರೊತಪ್ಪಿಸುತ್ತಿದ್ದಾರೆ, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಭ್ರಷ್ಟಾಚಾರದ ಮೂಲ ಬೇರನ್ನು ಕಿತ್ತೆಸೆಯುವ ಅಗತ್ಯವಿದೆ. ಅದಕ್ಕೆ ಪ್ರೇರಣೆ ನೀಡುತ್ತಿರುವ ಶಕ್ತಿಗಳನ್ನು ಗುರುತಿಸಿ ಅದನ್ನು ಮಟ್ಟ ಹಾಕುವ ಕಾರ್ಯ ನಡೆಯಬೇಕಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಜುನಾ ಅಖಾಡದ ಮಹಂತ ದೇವಾನಂದ ಸರಸ್ವತಿ ಸ್ವಾಮೀಜಿಯವರು ನೆರವೇರಿಸಿ ಮಾತನಾಡಿ ಇಂದು ನಮ್ಮ ಯುವ ಸಮುದಾಯ ಧಾರ್ಮಿಕತೆಯಿಂದ ದೂರ ಸರಿಯುತ್ತಿದ್ದಾರೆ ಇದಕ್ಕೆ ಕಾರಣ ನಮ್ಮ ಶಿಕ್ಷಣ ಪದ್ದತಿಯೇ ಆಗಿದೆ. ನಮ್ ಶಿಕ್ಷಣ ಪದ್ದತಿಯಲ್ಲಿ ಅಮೂಲ್ಯಾಗ್ರ ಬದಲಾವಣೆ ಅಗತ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News