ಕ್ರೀಡಾಪಟುಗಳ ತಯಾರಿ ಬಲಿಷ್ಟ ಭಾರತಕ್ಕೆ ನೀಡುವ ಕೊಡುಗೆ: ಯು.ಟಿ ಖಾದರ್

Update: 2018-09-03 14:28 GMT

ಮೂಡುಬಿದಿರೆ, ಸೆ.3: ಕೇವಲ ರಾಜಕಾರಣಿಗಳಿಂದ ಅಥವಾ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಆಡಳಿತ ನಡೆಸುವ ಅಧಿಕಾರಿಗಳಿಂದ ದೇಶ ಬಲಿಷ್ಟವಾಗಲು ಸಾಧ್ಯವಿಲ್ಲ. ಆರೋಗ್ಯಯುತ ಕ್ರೀಡಾಪಟುಗಳನ್ನು ತಯಾರಿಗೊಳಿಸುವುದೇ ಬಲಿಷ್ಟ ಭಾರತದ ನಿರ್ಮಾಣಕ್ಕೆ ನೀಡುವ ಕೊಡುಗೆ ಆಗಿದೆ ಎಂದು ಪೌರಾಡಳಿತ ಸಚಿವ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.

ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂರು ದಿನ ನಡೆಯುವ ರಾಜ್ಯ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2018ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಸ್ಪರ್ಧೆಯೆಂಬುದು ಸೋಲು-ಗೆಲುವಿನ ಮಿಶ್ರಣವಿದ್ದಂತೆ. ಪಾಲ್ಗೊಳ್ಳುವಿಕೆಯೇ ಇಲ್ಲಿ ಮುಖ್ಯವಾಗಿರುತ್ತದೆ ಎಂದು ಹೇಳಿದ ಅವರು ಕಲಿಕೆಯಷ್ಟೆ ಕ್ರೀಡೆಗು ಉತ್ತೇಜನವನ್ನು ನೀಡುತ್ತಾ ಬಂದಿರುವ ಅಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರನ್ನು ಶ್ಲಾಘಿಸಿದರು. 

ಶಾಸಕ ಉಮಾನಾಥ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸುವಲ್ಲಿ ವಿದ್ಯಾರ್ಥಿಗಳು ಮನಸ್ಸು ಮಾಡಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆ ರಾಷ್ಟ್ರಕ್ಕೆ ಅನೇಕ ಕ್ರೀಡಾಪಟುಗಳನ್ನು ನೀಡಿದೆ.  ಮುಂದೆ ಇಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಎಲ್ಲರು ಪ್ರೋತ್ಸಾಹ ನೀಡಬೇಕು ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಕ್ರೀಡಾಧ್ವಜಾರೋಹಣ ನೆರವೇರಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಅಳ್ವಾಸ್‍ನ ಅಭಿನಯ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. 

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕಿಶೋರ್ ಕುಮಾರ್,  ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ನಿನ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎ.ರಾಜವೇಲು, ಯುವ ಸಬಲೀಕರಣ ಇಲಾಖೆ ದ.ಕ ಜಿಲ್ಲೆ ಇದರ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ಪಂಡಿತ್ ಹೆಲ್ತ್ ರೆಸಾರ್ಟ್‍ನ ಆಡಳಿತ ನಿರ್ದೇಶಕ ಲಾಲ್ ಗೋಯಲ್, ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಸ್ವಾಗತಿಸಿದರು. ಬೆಂಗಳೂರಿನ ಸತೀಶ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News