ಭ್ರಷ್ಟ ಉದ್ಯೋಗಿಗಳ ವಿರುದ್ಧ ನ್ಯಾಯಾಲಯದ ವಿಚಾರಣೆಯೊಂದಿಗೆ ಶಿಸ್ತು ಕ್ರಮ ತೆಗೆದುಕೊಳ್ಳಬಹುದು: ಸಿವಿಸಿ
ಹೊಸದಿಲ್ಲಿ, ಸೆ. 3: ಭ್ರಷ್ಟ ಸರಕಾರಿ ಉದ್ಯೋಗಿಗಳ ವಿರುದ್ಧ ನ್ಯಾಯಾಲಯದ ಕ್ರಿಮಿನಲ್ ವಿಚಾರಣೆಗೆಳ ಜೊತೆಗೆ ಅತ್ಯಗತ್ಯದ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ವಿಚಕ್ಷಣಾ ಆಯೋಗ ಹೇಳಿದೆ.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಕಾರಣ ಒಡ್ಡಿ ಇಲಾಖೆ ಹಾಗೂ ಸಂಸ್ಥೆಗಳು ಶಿಸ್ತು ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡುತ್ತಿವೆ ಎಂಬುದನ್ನು ಕೆಲವು ‘ಶಿಸ್ತು ಪ್ರಕರಣ’ಗಳ ಪರಿಶೀಲನೆ ನಡೆಸುತ್ತಿರುವ ಆಯೋಗದ ಗಮನಕ್ಕೆ ಬಂದಿದೆ.
ಶಿಸ್ತು ಕ್ರಮವನ್ನು ಅಂತಿಮಗೊಳಿಸುವಲ್ಲಿ ಇಂತಹ ನಿಲುವು ಕಳವಳಕಾರಿ. ಇದು ಸರಿಯಾದ ಕ್ರಮವಲ್ಲ ಎಂದು ಇತ್ತೀಚೆಗೆ ಬ್ಯಾಂಕ್, ವಿಮಾ ಕಂಪೆನಿ ಹಾಗೂ ಇತರ ಎಲ್ಲ ಕೇಂದ್ರ ಸರಕಾರದ ಸಂಸ್ಥೆಗಳಿಗೆ ನೀಡಲಾದ ನಿರ್ದೇಶನಗಳಲ್ಲಿ ಆಯೋಗ ಹೇಳಿದೆ.
ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಉದ್ಯೋಗಿಯ ವಿರುದ್ಧ ಇಲಾಖೆ ವಿಚಾರಣೆಯನ್ನು ಸಂಸ್ಥೆಯ ಶಿಸ್ತು ಪ್ರಾಧಿಕಾರ ಏಕಕಾಲದಲ್ಲಿ ನಡೆಬೇಕಾದ ಅಗತ್ಯತೆ ಇದೆ ಎಂದು ಆಯೋಗ ಹೇಳಿದೆ.
ಕ್ರಿಮಿನಲ್ ವಿಚಾರಣೆ ಹಾಗೂ ಇಲಾಖೆ ವಿಚಾರಣೆಯನ್ನು ಏಕಕಾಲದಲ್ಲಿ ನಡೆಸಲು ಯಾವುದೇ ನಿರ್ಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಕೇಂದ್ರ ವಿಚಕ್ಷಣಾ ಆಯೋಗ ಉಲ್ಲೇಖಿಸಿದೆ.