ದೇರಳಕಟ್ಟೆ: ಚರಂಡಿ ಅವ್ಯವಸ್ಥೆ; ಕಲುಷಿತಗೊಂಡಿರುವ ಬಾವಿಗಳಿಂದ ಕುಡಿಯುವ ನೀರಿಗೆ ಸಮಸ್ಯೆ

Update: 2018-09-03 15:02 GMT

ಕೊಣಾಜೆ, ಸೆ. 3:  ದೇರಳಕಟ್ಟೆಯ ಕಾನಕ್ಕೆರೆ ಪ್ರದೇಶದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಸುಮಾರು 20 ಬಾವಿಗಳ ನೀರು ಕಲುಷಿತಗೊಂಡಿರುವ ಘಟನೆ ನಡೆದಿದ್ದು, ಇದರಿಂದ ಪ್ರದೇಶದ ಮನೆಮಂದಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,  ಈ ಕುರಿತು ಜಿಲ್ಲಾಡಳಿತ ಹಾಗೂ ಸ್ಥಳೀಯ ಪಂಚಾಯತಿಗೂ ಗ್ರಾಮಸ್ಥರು ದೂರು ನೀಡಿದ್ದಾರೆ.

ದೇರಳಕಟ್ಟೆ ಜಂಕ್ಷನ್ನಿನಲ್ಲಿ  6 ವರ್ಷಗಳ ಹಿಂದೆ ನೆಲೆನಿಂತ ಖಾಸಗಿ ಕಟ್ಟಡದಿಂದಾಗಿ ಚರಂಡಿ ಅವ್ಯವಸ್ಥೆಯಿಂದಾಗಿ ಕುಡಿಯುವ ನೀರಿನ ಬಾವಿಗಳಲ್ಲಿ ಸಮಸ್ಯೆ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ. ಇದರಿಂದ  ಕಳೆದ ಹಲವಾರು ವರ್ಷಗಳಿಂದ ಬಾಳುತ್ತಿರುವ ಕಾನೆಕೆರೆ ಪ್ರದೇಶದ ಜನ ತೊಂದರೆಗೀ ಡಾಗುತ್ತಿದ್ದಾರೆ.  ವಾಣಿಜ್ಯ  ಸಂಕೀರ್ಣ ಕಟ್ಟಡದಲ್ಲಿ ಹೊಟೇಲು, ಅಂಗಡಿಗಳು ಹಾಗೂ  ಲಾಡ್ಜಿಂಗ್ ವ್ಯವಸ್ಥೆ ಇದೆ. ಆದರೆ  ಕಟ್ಟಡದ ಮಾಲೀಕರು ಚರಂಡಿ  ನಿರ್ಮಿಸಿದ್ದರೂ, ತೈಲದಂತೆ  ರಾಸಾಯನಿಕ  ಹರಿದು ಸ್ಥಳೀಯ ಬಾವಿಗಳನ್ನು ಸೇರುತ್ತಿದೆ. ಇದರಿಂದ   ಬಾವಿಗಳಲ್ಲಿನ ನೀರು ಕುಡಿಯಲು ಅಯೋಗ್ಯ ವಾಗಿದೆ. ವರ್ಷದಿಂದ ಸಮಸ್ಯೆ ಉಲ್ಬಣವಾಗಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಬೆಳ್ಮ ಗ್ರಾಮ ಪಂಚಾಯಿತಿಗೆ ದೂರು ನೀಡುತ್ತಾ ಬಂದಿದ್ದೇವೆ . ಆದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಅನ್ನುವ ಆರೋಪ ಸ್ಥಳೀಯರದ್ದಾಗಿದೆ. 

ಪೈಪ್ ಮುಚ್ಚಿದ ಪಂಚಾಯತ್ : ರವಿವಾರ  ಸ್ಥಳೀಯ ಬೆಳ್ಮ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರು ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಟ್ಟಡದಿಂದ ಹೊರಬರುವ ನೀರಿನ ಪೈಪುಗಳನ್ನು ಮುಚ್ಚಿದ್ದಾರೆ.  ಕಟ್ಟಡದವರು  ಸ್ಥಳೀಯ ನಿವಾಸಿಗಳಿಗೆ ಮುಂದೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವವರೆಗೂ ಪೈಪನ್ನು ಮುಚ್ಚಿಯೇ ಇಡಲಾಗುವುದು  ಎಂದು ಉಪಾಧ್ಯಕ್ಷ ಸತ್ತಾರ್ ತಿಳಿಸಿದ್ದಾರೆ.

150 ಮನೆಗಳ ನಿವಾಸಿಗಳು ಬಾವಿಯ ನೀರನ್ನು ಆಶ್ರಯಿಸುತ್ತಿದ್ದಾರೆ. ಆದರೆ ಖಾಸಗಿ ಕಟ್ಟಡದ ಚರಂಡಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದ ದಾರಿಯುದ್ದಕ್ಕೂ  ಚರಂಡಿ ನೀರು ಹರಿಯುತ್ತಾ ಜನರಿಗೆ ನಡೆದಾಡಲೂ ತೊಂದರೆಯಾಗುತ್ತಿದೆ.  ಚರಂಡಿ ನೀರಿಗೆಂದು  ಕಟ್ಟಡದ ಮಾಲೀಕರು ಬಾವಿ ಕಟ್ಟಿ ಅದರೊಳಕ್ಕೆ ಬಿಡುತ್ತಿದ್ದಾರೆ. ಆದರೆ  ಇದರಿಂದಾಗಿ ಬಾವಿಗಳೆಲ್ಲವೂ  ಕಲುಷಿತಗೊಂಡಿದೆ. ಜನರಿಗೆ ಕುಡಿಯಲು ಸರಿಯಾದ  ನೀರು ಕೂಡಾ ಇಲ್ಲ.  ಪಂಚಾಯಿತಿ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸವನ್ನು ಕೊಟ್ಟಿದೆ. ಅದರ ಭರವಸೆಯಲ್ಲಿ ಕಾನಕ್ಕೆರೆ ನಿವಾಸಿಗಳು ಇದ್ದೇವೆ.
- ಮಹಮ್ಮದ್ ಫಾರೂಕ್, ಕಾನೆಕ್ಕೆರೆ ನಿವಾಸಿ 

ಚರಂಡಿ ನೀರು ತೋಡಿನಲ್ಲಿ ಬಂದು  ಬಾವಿ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. 100 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಆದರೆ 6ವರ್ಷಗಳ ಹಿಂದೆ ಬಂದವರಿಂದ ಇದೀಗ ಜನರಿಗೆ ತೊಂದರೆಯಾಗುತ್ತಿದೆ. ದಾರಿಯಲ್ಲಿ ನಡೆದಾಡಿಕೊಂಡು ಮಸೀದಿ, ಶಾಲೆಗೆ ತೆರಳಲು ಮಕ್ಕಳಿಗೆ  ಹಾಗೂ ದೊಡ್ಡವರಿಗೂ ಸಮಸ್ಯೆಯಾಗಿದೆ.  ಸಂಬಂಧಪಟ್ಟವರಿಗೆ ದೂರು ನೀಡಿ ಸಾಕಾಗಿ ಹೋಗಿದೆ. 
-ಅಬೂಬಕ್ಕರ್ , ಕಾನಕ್ಕೆರೆ ನಿವಾಸಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News