ದ.ಕ. ಜಿಲ್ಲಾ ಸ್ಥಳಿಯಾಡಳಿತ ಚುನಾವಣೆ: ಪುತ್ತೂರು ನಗರಸಭೆ ಬಿಜೆಪಿಗೆ, ಉಳ್ಳಾಲ, ಬಂಟ್ವಾಳದಲ್ಲಿ ಅತಂತ್ರ

Update: 2018-09-03 16:26 GMT

ಮಂಗಳೂರು, ಸೆ. 3: ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುರಸಭೆ ಹಾಗೂ ಎರಡು ನಗರ ಸಭೆಗಳಿಗೆ ಆ.31ರಂದು ನಡೆದ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮತ ಎಣಿಕೆ ನಡೆದಿದೆ. ಕಳೆದ ಬಾರಿ ಪುತ್ತೂರು ,ಉಳ್ಳಾಲ ಮತ್ತು ಬಂಟ್ವಾಳದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಎಸ್‌ಡಿಪಿಐ ಮತ್ತು ಜೆಡಿಎಸ್ ಬಲವೃದ್ಧಿಸಿಕೊಂಡಿದೆ.

ದ.ಕ ಜಿಲ್ಲೆಯ ಒಟ್ಟು 89 ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳಲ್ಲಿ 42ಬಿಜೆಪಿ,30 ಕಾಂಗ್ರೆಸ್,11ಎಸ್‌ಡಿಪಿಐ ,4 ಜೆಡಿಎಸ್ ಹಾಗೂ 2 ಕಡೆಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಪುತ್ತೂರು,ಬಂಟ್ವಾಳ ಹಾಗೂ ಉಳ್ಳಾಲ ಸ್ಥಳೀಯಾಡಳಿತದಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಬಂಟ್ವಾಳ ಹಾಗೂ ಉಳ್ಳಾಲದಲ್ಲಿ ಉಳಿದ ಪಕ್ಷಗಳಿಗಿಂತಲೂ ಹೆಚ್ಚು ಸ್ಥಾನ ಪಡೆದಿದ್ದರೂ ಬಹುಮತಗಳಿಸಿಲ್ಲ. ಅಧಿಕಾರ ಪಡೆಯ ಬೇಕಾದರೆ ಉಳಿದ ಪಕ್ಷಗಳ ಬೆಂಬಲ ಪಡೆಯಬೇಕಾಗಿದೆ. ಪುತ್ತೂರಿನಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್ ಈ ಬಾರಿ ನಗರ ಸಭೆಯಾದ ಬಳಿಕ 10 ಸ್ಥಾನಗಳನ್ನು ಕಳೆದು ಕೊಂಡು ಕೇವಲ 5 ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.12 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಈ ಬಾರಿ 13 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದು 25 ಸ್ಥಾನಗಳಿಸಿ ಸ್ಪಷ್ಟ ಬಹುಮತ ಪಡೆದಿದೆ.

ಎಸ್‌ಡಿಪಿಐ ಪುತ್ತೂರಿನಲ್ಲೂ ಒಂದು ಸ್ಥಾನ ಪಡೆದು ಖಾತೆ ತೆರೆದಿದೆ. ಬಂಟ್ವಾಳ ಪುರಸಭೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಒಟ್ಟು 27 ಸ್ಥಾನಗಳ ಪೈಕಿ 12 ಕಾಂಗ್ರೆಸ್,11ಬಿಜಿಪಿ 4 ಎಸ್‌ಡಿಪಿಐ ಸ್ಥಾನಗಳಿಸಿದೆ.ಕಳೆದ ಬಾರಿ 23 ಸ್ಥಾನಗಳ ಪೈಕಿ ಕಾಂಗ್ರೆಸ್ 13,ಬಿಜೆಪಿ 5,ಎಸ್‌ಡಿಪಿಐ 3,ಪಕ್ಷೇತರ1, ಜೆಡಿಎಸ್1ಸ್ಥಾನಗಳಿಸಿತ್ತು.

ಉಳ್ಳಾಲ ನಗರ ಪುರಸಭೆಯಾಗಿದ್ದಾಗ ಕಳೆದ ಬಾರಿ 27ಸ್ಥಾನಗಳಲ್ಲಿ ಕಾಂಗ್ರೆಸ್ 17,ಬಿಜೆಪಿ 7 ಪಕ್ಷೇತರರು 2,ಎಸ್‌ಡಿಪಿಐ 1 ಸ್ಥಾನಗಳಿಸಿತ್ತು. ನಗರಸಭೆಯಾದ ಬಳಿಕ ಈ ಬಾರಿ ಉಳ್ಳಾಲದಲ್ಲಿ 4 ಸ್ಥಾನಗಳು ಸೇರ್ಪಡೆಯಾಗಿದ್ದು ಒಟ್ಟು 31 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13ಕ್ಕೆ ಕುಸಿದಿದೆ. ಬಿಜೆಪಿ ಕಳೆದ ಬಾರಿಗಿಂತ ಕೇವಲ 1 ಸ್ಥಾನವನ್ನು ಕಳೆದುಕೊಂಡು 6ಕ್ಕೆ ಇಳಿದಿದೆ.

ಯಾವೂದೇ ಸ್ಥಾನ ಪಡೆಯದಿದ್ದ ಜೆಡಿಎಸ್ ಈ ಬಾರಿ 4 ಸ್ಥಾನಗಳಿಸಿದೆ.ಎಸ್‌ಡಿಪಿಐ ಕಳೆದ 1 ಸ್ಥಾನಗಳಿಸಿದ್ದರೆ ಈ ಬಾರಿ 5 ಸ್ತಾನ ಹೆಚ್ಚುಗಳಿಸಿ 6ಕ್ಕೇರಿದೆ.ಪಕ್ಷೇತರರು ಕಳೆದ ಬಾರಿಯೂ 2 ಸ್ಥಾನಗಳಿಸಿದು ಈ ಬಾರಿಯೂ 2 ಸ್ಥಾನಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News