ಹೆಲಿಕಾಪ್ಟರ್ ಪತನ; 12 ಮಂದಿ ಸಾವು

Update: 2018-09-03 17:03 GMT

 ಮಝರೆ ಶರೀಫ್, ಸೆ.3: ಉತ್ತರ ಅಫ್ಘಾನಿಸ್ತಾನದಲ್ಲಿ ರವಿವಾರ ಹೆಲಿಕಾಪ್ಟರ್ ಒಂದು ಪತನಗೊಂಡು ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.

 ಅಫ್ಘಾನ್ ಭದ್ರತಾಪಡೆಯ 11 ಮಂದಿ ಸೇರಿದಂತೆ 14 ಜನರನ್ನು ಹೊತ್ತೊಯ್ಯುತ್ತಿದ್ದ ಈ ಹೆಲಿಕಾಪ್ಟರ್, ಉತ್ತರ ಅಫ್ಘಾನಿಸ್ತಾನದ ಪ್ರಾಂತವಾದ ಬಾಲ್ಖ್‌ನಲ್ಲಿ ಪತನಗೊಂಡಿದೆ.

 ಈ ಹೆಲಿಕಾಪ್ಟರ್, ಮೊಲ್ಡೊವನ್ ಕಂಪೆನಿಗೆ ಸೇರಿದ್ದೆಂದು ತಿಳಿದುಬಂದಿದೆ. ಅವಘಡದಲ್ಲಿ ಮೃತಪಟ್ಟ ಇಬ್ಬರು ಉಕ್ರೇನ್ ಪ್ರಜೆಗಳು, ಹೆಲಿಕಾಪ್ಟರ್‌ನ ಚಾಲಕ ಸಿಬ್ಬಂದಿಗಳಾಗಿದ್ದಾರೆ. ಇನ್ನೋರ್ವ ಉಕ್ರೇನಿಯನ್ ಚಾಲಕ ಸಿಬ್ಬಂದಿ, ಅವಘಡದಲ್ಲಿ ಬದುಕುಳಿದಿದ್ದಾನೆಂದು ಭದ್ರತಾಪಡೆಗಳು ತಿಳಿಸಿವೆ. ಅವಘಡ ಸಂಭವಿಸಿದಾಗ ಈ ಹೆಲಿಕಾಪ್ಟರ್ ಶಶ್ತ್ರಾಸ್ತ್ರಗಳನ್ನು ಕೊಂಡೊಯ್ಯುತ್ತಿತ್ತು. ಪತನಗೊಂಡಾಗ ಶಸ್ತ್ರಾಸ್ತ್ರಗಳು ಸ್ಫೋಟಿಸಿದ್ದರಿಂದ ಮೃತದೇಹಗಳನ್ನು ಗುರುತುಹಿಡಿಯುವುದೇ ಕಷ್ಟವಾಗಿದೆಯೆಂದು ಮೂಲಗಳು ತಿಳಿಸಿವೆ.

  ಈ ಹೆಲಿಕಾಪ್ಟರ್ ಸೇನಾನೆಲೆಯೊಂದರಿಂದ ಯುದ್ಧಗ್ರಸ್ತ ಫರ್ಯಾಬ್ ಪ್ರಾಂತಕ್ಕೆ ಅಫ್ಘಾನ್ ಭದ್ರತಾಪಡೆಗಳನ್ನು ಕೊಂಡೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಉತ್ತರ ಅಫ್ಘಾನಿಸ್ತಾನದ ಉಪ ಕಮಾಂಡರ್ ನಾಝರ್ ಖುದಾ ಪಾಮಿರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News