ಸಿಜೆಐ ದೀಪಕ್ ಮಿಶ್ರಾ ಸೇರಿ 8 ನ್ಯಾಯಾಧೀಶರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ: ನ್ಯಾ. ಕರ್ಣನ್

Update: 2018-09-04 13:59 GMT

ಹೊಸದಿಲ್ಲಿ, ಸೆ.4: ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕರ್ಣನ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ತಾನು ಈ ಹಿಂದೆ ಎಂಟು ‘ಭಯೋತ್ಪಾದಕ ನ್ಯಾಯಾಧೀಶರ’ ವಿರುದ್ಧ ನ್ಯಾಯಾಂಗ ಆದೇಶ ಜಾರಿಗೊಳಿಸಿದ್ದೆ. ಆದರೆ ಈ ಆದೇಶವನ್ನು ಇನ್ನೂ ಜಾರಿಗೊಳಿಸಿಲ್ಲ ಮತ್ತು ಈ ವಿವಾದವನ್ನು ಭಾರತದಲ್ಲಿ ಪರಿಹರಿಸಲು ಅಸಾಧ್ಯ ಎಂದು ಮನವರಿಕೆಯಾಗಿರುವ ಕಾರಣ ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ಕ್ಕೆ ಕೊಂಡೊಯ್ಯಲಾಗುವುದು ಎಂದು ಸುಪ್ರೀಂಕೋರ್ಟ್‌ನ ನೋಂದಣಿ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ತಾನು ಈ ಹಿಂದೆ 8 ಆರೋಪಿಗಳು/ ಸಮಾಜ ವಿರೋಧಿ ಶಕ್ತಿಗಳು/ ಭಯೋತ್ಪಾದಕ ನ್ಯಾಯಾಧೀಶರಾದ ಮಾಜಿ ಸಿಜೆಐ (ಮುಖ್ಯ ನ್ಯಾಯಾಧೀಶ) ಜೆ.ಎಸ್.ಖೇಹರ್, ಹಾಲಿ ಸಿಜೆಐ ದೀಪಕ್ ಮಿಶ್ರಾ, ಮಾಜಿ ನ್ಯಾಯಾಧೀಶ ಚೆಲಮೇಶ್ವರ್, ನ್ಯಾಯಾಧೀಶರಾದ ರಂಜನ್ ಗೊಗೋಯ್, ಮದನ್ ಬಿ.ಲೋಕೂರ್, ಪಿ.ಸಿ.ಘೋಷ್, ಕುರಿಯನ್ ಜೋಸೆಫ್ ಮತ್ತು ಆರ್. ಭಾನುಮತಿ ವಿರುದ್ಧ ನ್ಯಾಯಾಂಗ ಆದೇಶ ಹೊರಡಿಸಿರುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಉಚ್ಛನ್ಯಾಯಾಲಯದ ಹಾಲಿ 20 ನ್ಯಾಯಾಧೀಶರು ಭ್ರಷ್ಟರು ಎಂದು ಆರೋಪಿಸಿ, ಇವರ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿ ನ್ಯಾ. ಕರ್ಣನ್ ಪ್ರಧಾನಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು ಮತ್ತು ಅವರು ಅಪರಾಧಿ ಎಂದು ಘೋಷಿಸಲಾಗಿತ್ತು. ಪ್ರಕರಣದಲ್ಲಿ ನ್ಯಾ. ಕರ್ಣನ್ ಜೈಲುಶಿಕ್ಷೆಗೆ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News