ಪೆಟ್ರೋಲ್ ಬೆಲೆ ಶೀಘ್ರದಲ್ಲಿ 100 ರೂ.ಗೆ ಏರಲಿದೆ: ಚಂದ್ರಬಾಬು ನಾಯ್ಡು

Update: 2018-09-04 14:01 GMT

ಅಮರಾವತಿ, ಸೆ. 4: ತೈಲ ಬೆಲೆಯ ನಿರಂತರ ಏರಿಕೆ ಕುರಿತು ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಶೀಘ್ರದಲ್ಲಿ ಪೆಟ್ರೋಲ್ ಲೀಟರ್‌ಗೆ 100 ರೂ.ಗೆ ಮಾರಾಟವಾಗಲಿದೆ ಎಂದಿದ್ದಾರೆ.

ಅಲ್ಲದೆ, ಪೆಟ್ರೋಲ್ ಬೆಲೆ ಏರಿಕೆಯಾಗಲು ಅಮೆರಿಕ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 100 ರೂ.ಗೆ ತಲುಪಿರುವುದು ಕಾರಣ ಎಂದಿದ್ದಾರೆ. ನೋಟು ಅಮಾನ್ಯೀಕರಣ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು, ನಗದು ನಿಷೇಧವನ್ನು ಸಮರ್ಪಕವಾಗಿ ನಿರ್ವಹಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದರು.

 ನೋಟು ಅಮಾನ್ಯೀಕರಣದಿಂದ ನಾವು ಸಾಧಿಸಿದ್ದಾದರೂ ಏನು ?, ನಾವು ಇಂದು ಬ್ಯಾಂಕ್‌ನ ಸ್ಥಿತಿ ನೋಡುತ್ತಿಲ್ಲವೇ ?, ದೊಡ್ಡ ನೋಟುಗಳನ್ನು ರದ್ದುಗೊಳಿಸಬೇಕು. 2000 ರೂಪಾಯಿ ನೋಟಿನ ಅಗತ್ಯತೆ ಇದೆಯೇ ?, ಮೋದಿ ಸರಕಾರ ನೋಟು ಅಮಾನ್ಯೀಕರಣವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಡಿಜಿಟಲ್ ಕರೆನ್ಸಿ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದರೆ ತನಗೆ ಯಾವುದೇ ತೊಂದರೆ ಇಲ್ಲ. ಆದರೆ, ಡಿಜಿಟಲ್ ಕರೆನ್ಸಿ ಹಾಗೂ ಭೌತಿಕ ಕರೆನ್ಸಿ ನಡುವೆ ಸೂಕ್ತ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು.

ದೇಶದ ಹಲವು ಭಾಗಗಳಲ್ಲಿ ನಗದು ಕೊರತೆ ಇದೆ. ಜಿಡಿಪಿಯ ಇತ್ತೀಚೆಗಿನ ಬೆಳವಣಿಗೆ ಇಲ್ಲಿನ ಜನರ ಸಾಮರ್ಥ್ಯದ ಫಲಿತಾಂಶ. ಎನ್‌ಡಿಎಯ ಸಾಧನೆ ಅಲ್ಲ ಎಂದು ಅವರು ಹೇಳಿದರು. ‘‘ಪ್ರಧಾನಿ ನರೇಂದ್ರ ಮೋದಿ ಅವರು ಶಿಸ್ತು ಬದ್ಧವಾಗಿ ಇಲ್ಲ. ಇದು ಅವರ ಅಸಾಮರ್ಥ್ಯತೆ. ಈಗ ಕೂಡ ಎಟಿಎಂಗಳಲ್ಲಿ ನಗದು ಕೊರತೆ ಇದೆ. ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರೀಯ ಬೆಳವಣಿಗೆ ಕುಂಠಿತವಾಗಿದೆ. ಕೇಂದ್ರ ಸರಕಾರ ಶಿಸ್ತು ಬದ್ಧವಾಗಿದ್ದರೆ, ಭ್ರಷ್ಟಾಚಾರ ಏಕೆ ನಡೆಯುತ್ತಿದೆ ?. ಭ್ರಷ್ಟಾಚಾರದಲ್ಲಿ ಬ್ಯಾಂಕ್ ಯಾಕೆ ಭಾಗಿಯಾಗುತ್ತಿದೆ.? ಮೋದಿ ಅವರು ಪ್ರಾಮಾಣಿಕತೆ, ಸತ್ಯಸಂಧತೆ ಹಾಗೂ ಶಿಸ್ತಿನ ಬಗ್ಗೆ ಮಾತನಾಡಲು ಅರ್ಹರಲ್ಲ’’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News