ವಿದೇಶ ಪ್ರವಾಸಗಳಲ್ಲಿ ಪ್ರಧಾನಿ ಜೊತೆಗಿದ್ದ ಖಾಸಗಿ ವ್ಯಕ್ತಿಗಳ ಹೆಸರು ಬಹಿರಂಗಗೊಳಿಸಿ

Update: 2018-09-04 14:02 GMT

ಹೊಸದಿಲ್ಲಿ,ಸೆ.4: ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಲ್ಲಿ ಅವರ ಜೊತೆಯಲ್ಲಿದ್ದ ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶ ನೀಡಿದೆ.

2015-16 ಮತ್ತು 2016-17ನೇ ಸಾಲುಗಳಲ್ಲಿ ಪ್ರಧಾನಿಯವರ ವಿದೇಶಗಳ ಭೇಟಿಗೆ ತಗುಲಿದ್ದ ವೆಚ್ಚಗಳ ಮಾಹಿತಿ ಮತ್ತು ಅವರೊಂದಿಗೆ ಪ್ರಯಾಣಿಸಿದ್ದ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಕೋರಿ ಕರಬಿ ದಾಸ್ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ತೃಪ್ತಿದಾಯಕ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಅವರು ಮಾಹಿತಿ ಆಯೋಗದ ಮೆಟ್ಟಿಲನ್ನೇರಿದ್ದರು.

ಮಾಹಿತಿಗಳನ್ನು ಒದಗಿಸಲು ಸಚಿವಾಲಯವು ದಾಸ್ ಅವರಿಂದ 224 ರೂ.ಗಳ ಶುಲ್ಕವನ್ನು ಪಡೆದಿತ್ತು ಎಂದು ವಿಚಾರಣೆ ವೇಳೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಆರ್‌ಟಿಐ ಕಾರ್ಯಕರ್ತ ಸುಭಾಷ್ ಅಗರವಾಲ್ ಅವರು ತಿಳಿಸಿದ್ದಾಗಿ ಮುಖ್ಯ ಮಾಹಿತಿ ಆಯಕ್ತ ಆರ್.ಕೆ.ಮಾಥೂರ್ ಹೇಳಿದರು.

ದಿನಾಂಕ ಮತ್ತು ಭೇಟಿಯಾದ ಸ್ಥಳ ಹಾಗೂ ಬಾಡಿಗೆ ವಿಮಾನಗಳಿಗೆ ತಗುಲಿದ ಖರ್ಚನ್ನು ಹೊರತುಪಡಿಸಿ ಇತರ ಯಾವುದೇ ಮಾಹಿತಿಗಳು ಸಂಚಿತ ರೂಪದಲ್ಲಿ ಲಭ್ಯವಿಲ್ಲ ಎಂದು ಸಚಿವಾಲಯವು ವಿಚಾರಣೆ ವೇಳೆ ತನ್ನ ಹೇಳಿಕೆಗಳಲ್ಲಿ ತಿಳಿಸಿತ್ತು.

224 ರೂ.ಶುಲ್ಕದ ಪಾವತಿಗೆ ಸಂಬಂಧಿಸಿದಂತೆ ತಾನು ವಿಷಯವನ್ನು ಪರಿಶೀಲಿಸುವುದಾಗಿ ಮತ್ತು ಇತ್ತೀಚಿನ ಮಾಹಿತಿಗಳನ್ನು ಒದಗಿಸುವುದಾಗಿ ಸಚಿವಾಲಯವು ಆಯೋಗಕ್ಕೆ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News