ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಬಿಷಪ್ ಡಾ.ಲೋಬೊ

Update: 2018-09-04 15:08 GMT

ಉಡುಪಿ, ಸೆ.4: ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಉತ್ತಮ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಮೇಲಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಶಿಕ್ಷಣ ಸೊಸೈಟಿ ವತಿಯಿಂದ ಮಂಗಳವಾರ ಉಡುಪಿಯ ಡಾನ್ ಬಾಸ್ಕೊ ಹಾಲ್‌ನಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತಿದ್ದರು.

ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಗಿಂತಲೂ ಗುರುವಿನ ಸ್ಥಾನ ಹಿರಿದು. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು. ಶಿಕ್ಷಕರೆಂದರೆ ಇಂದು ಕೇವಲ ವೃತ್ತಿಗೆ ಸೀಮಿತವಾಗಿದೆ. ದೇಶ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಶಿಕ್ಷಕರಿಲ್ಲದೆ ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಪ್ರಸ್ತುತ ಭಾರತದಲ್ಲಿ ಮೌಲ್ಯಾಧಾರಿತ ಶಿಕ್ಷಕರ ಕೊರತೆಯಿಂದ ಮೌಲ್ಯಾ ಧಾರಿತ ಶಿಕ್ಷಣ ಮರೀಚಿಕೆಯಾಗುತ್ತಿದೆ. ಈಗ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ. ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದಲ್ಲಿ ಇಲ್ಲವಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿ, ಸಮಾಜದಲ್ಲಿ ಶಿಕ್ಷಕರಿಗೆ ಪ್ರಥಮ ಸ್ಥಾನ ನೀಡುವ ಉನ್ನತ ಪರಂಪರೆ ನಮ್ಮದು. ವಿದ್ಯಾರ್ಥಿಗಳನ್ನು ಪ್ರೀತಿಸುವುದರ ಮೂಲಕ ಸಮಾಜದ ಸಭ್ಯ ನಾಗರಿಕನ್ನಾಗಿ ರೂಪಿಸಿದಾಗ ಮಾತ್ರ ಒರ್ವ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತದ ಆಡಳಿತಕ್ಕೆ ಒಳಪಟ್ಟ ಶಾಲಾ -ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರನ್ನು ಹಾಗೂ ಸಿಬಂದಿಗಳನ್ನು, ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು, ಹಾಗೂ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ.ವಲೇರಿ ಯನ್ ಮೆಂಡೊನ್ಸಾ ಸ್ವಾಗತಿಸಿದರು. ಕೆಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ ಧರ್ಮಪ್ರಾಂತದ ಕಾರ್ಯದರ್ಶಿ ವಂ.ಡಾ.ಲೊರೇನ್ಸ್ ಡಿಸೋಜ ವಂದಿಸಿದರು. ವಿನಯ್ ಮತ್ತು ಹೆಲೆನ್ ಕರ್ನೇಲಿಯೋ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News