ಸೆ.5: ಪುತ್ತೂರಿನಲ್ಲಿ ರಾಜ್ಯ ಮಟ್ಟದ ಉದ್ಯೋಗ ಮೇಳ

Update: 2018-09-04 15:16 GMT

ಪುತ್ತೂರು, ಸೆ. 4: ಬೆಂಗಳೂರಿನ ವಿದ್ಯಾಮಾತಾ ಫೌಂಡೇಶನ್ ಆಶ್ರಯದಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ ಸೆಪ್ಟೆಂಬರ್ 8ರಂದು ಪುತ್ತೂರು ನೆಹರೂನಗರದ ಸುದಾನ ವಸತಿಯುತ ಶಾಲೆಯ ವಠಾರದಲ್ಲಿ ನಡೆಯಲಿದೆ ಎಂದು ವಿದ್ಯಾಮಾತಾ ಫೌಂಡೇಶನ್‍ನ ಸ್ಥಾಪಕರಾದ ಭಾಗ್ಯೇಶ್ ರೈ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಯೋಗ ಮೇಳ ಉದ್ಘಾಟಿಸಲಿದ್ದಾರೆ. ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ವಿದ್ಯಾನಿಧಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸುದಾನ ಶಾಲೆಯ ಸಂಚಾಲಕ ರೆ.ವಿಜಯ ಹಾರ್ವಿನ್, ಜಯ ಕರ್ನಾಟಕ ಸಂಘಟನೆಯ ತಾಲೂಕು ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಉದ್ಯಮಿ ಜಯಂತ ನಡುಬೈಲ್, ಉದ್ಯಮಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ, ಮನ್ವಿತ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಅಮೃತ ಹಿರಣ್ಯ, ಡಾ. ಉಷಾ ಮೋಹನ್, ಅಚ್ಚುತಾನಂದ ಎಸ್ ಮತ್ತು ಕಿಶೋರ್ ರೈ ಕತ್ತಲಕಾಡು ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ಅಲ್ಲದೆ ಕೊಡಗು ಜಿಲ್ಲಾ ನಿರಾಶ್ರಿತರಾದ ಕುಟುಂಬದ ಯುವಕ ಯುವತಿಯರಿಗೆ ಉದ್ಯೋಗಾಂಕ್ಷಿಯಾಗಿ ಬಂದಲ್ಲಿ ಅವರ ವಿದ್ಯೆಗೆ ಅನುಗುಣವಾದ ಕನಿಷ್ಠ 25 ಉದ್ಯೋಗವನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.

ಮೇಳದಲ್ಲಿ  ರಾಷ್ಟ್ರಮಟ್ಟದ ನೂರಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿದ್ದಾರೆ. 4000ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುವ ಉದ್ದೇಶವಿದೆ. ಈಗಾಗಲೇ 75ಕ್ಕೂ ಅಧಿಕ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಇನ್ನೂ ಸಾಕಷ್ಟು ನೋಂದಣಿ ಮಾಡಿಕೊಳ್ಳಲಿವೆ. ಈ ಎಲ್ಲ ಕಂಪನಿಗಳಲ್ಲಿ 16,241 ಹುದ್ದೆಗಳು ಇದ್ದು, ಅದರಲ್ಲಿ 4ರಿಂದ 5 ಸಾವಿರ ಹುದ್ದೆಗಳನ್ನು ಈ ಮೇಳದಲ್ಲಿ ಭರ್ತಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಇದಲ್ಲದೆ ವಿಕಲ ಚೇತನರಿಗೂ ಸುಮಾರು 75 ಹುದ್ದೆಗಳನ್ನು ನೀಡುವ ಗುರಿ ಇದೆ ಎಂದರು.

ಉದ್ಯೋಗ ಮೇಳ ಆರಂಭಗೊಳ್ಳುತ್ತಲೇ ಮೊದಲ ಹಂತದಲ್ಲಿ ಗ್ರಾಮೀಣ ಭಾಗದ ಅಭ್ಯರ್ಥಿಗಳಲ್ಲಿರುವ ಸಂದರ್ಶನ ಎದುರಿಸುವ ಭಯ ನಿವಾರಣೆ ಉದ್ದೇಶದಿಂದ ಸ್ಥಳದಲ್ಲೇ ಮಾಹಿತಿ ಕಾರ್ಯಾಗಾರ ನಡೆಯುತ್ತದೆ. 7ನೇ ತರಗತಿಯಿಂದ ಆರಂಭಿಸಿ ಸ್ನಾತಕೋತ್ತರ, ವೃತ್ತಿಪರ ಕೋರ್ಸ್‍ಗಳವರು ಮೇಳದಲ್ಲಿ ಭಾಗವಹಿಸಲು ಅವಕಾಶಗಳಿವೆ. ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಇದೆ. ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡವರಿಗೆ 2 ದಿನ ಮುಂಚಿತವಾಗಿ ಇ ಮೇಲ್ ಮೂಲಕ ಕಂಪೆನಿಗಳ ಮಾಹಿತಿ ನೀಡಲಾಗುವುದು ಎಂದರು.

ಮೇಳದಲ್ಲಿ ರಾಜ್ಯದ ಯಾವುದೇ ಭಾಗದಿಂದಲೂ ಅಭ್ಯರ್ಥಿಗಳು ಬಂದು ಭಾಗವಹಿಸಬಹುದು. 300 ರೂ. ನೋಂದಣಿ ಶುಲ್ಕ ಬಿಟ್ಟರೆ ಬೇರಾವುದೇ ಮೊತ್ತ ಪಾವತಿ ಮಾಡುವ ಅಗತ್ಯವಿಲ್ಲ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, 10 ಅರ್ಜಿ (ರೆಸ್ಯೂಮ್), 5 ಭಾವಚಿತ್ರಗಳನ್ನು ತರಬೇಕು. ಒಬ್ಬ ಅಭ್ಯರ್ಥಿ 5 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸಂದರ್ಶನ ಮುಗಿದ ಬೆನ್ನಲ್ಲೇ ಪ್ರತೀ ಗಂಟೆಗೊಮ್ಮೆ ಆಯ್ಕೆಯಾದವರಿಗೆ ಆಯ್ಕೆ ಪತ್ರ ಸ್ಥಳದಲ್ಲೇ ವಿತರಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾಮಾತಾ ಫೌಂಡೇಶನ್‍ನ ಪ್ರಧಾನ ಕಾರ್ಯದರ್ಶಿ ಭವಿತ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News