ಕಾಪು ತ್ಯಾಜ್ಯ ಘಟಕ ಎಲ್ಲೂರಿನಲ್ಲಿ ಬೇಡ: ಎಲ್ಲೂರು ಗ್ರಾಮಸ್ಥರ ವಿರೋಧ

Update: 2018-09-04 15:19 GMT

ಪಡುಬಿದ್ರಿ, ಸೆ. 4: ಎಲ್ಲೂರಿನಲ್ಲಿ ಯಾವುದೇ ಕಾರಣಕ್ಕೂ ಕಾಪು ಪುರಸಭೆಯ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡದೆ ಪುರಸಭೆ ಬಳಿಯಲ್ಲಿಯೇ ಇರುವ ಎರಡು ಎಕರೆ ಜಮೀನಿನಲ್ಲಿ ಘಟಕ ನಿರ್ಮಿಸಿ ಎಂದು ಎಲ್ಲೂರು ಗ್ರಾಮಸ್ಥರು ತಾಕೀತು ಮಾಡಿದ ಘಟನೆ ಮಂಗಳವಾರ ನಡೆದಿದೆ.

ಎಲ್ಲೂರು ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಕಾಪು ಪುರಸಭೆ ಹಾಗೂ ಎಲ್ಲೂರು ಗ್ರಾಮ ಪಂಚಾಯಿತಿ ಸಂಯುಕ್ತವಾಗಿ ಆಯೋಜಿಸಿದ ಮಾಹಿತಿ ಕಾರ್ಯಾಗಾರ ಹಾಗೂ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ

ಕಾಪು ಪುರಸಭೆಯು ಎಲ್ಲೂರು ಗ್ರಾಮ ಪಂಚಾಯಿತಿಯ ಉಳ್ಳೂರು (ಉಳ್ಳಾಲ ಕಾಡು) ನಲ್ಲಿ ಸ್ಥಾಪಿಸಲುದ್ದೇಶಿಸಿರುವ ಘನ, ದ್ರವ ತ್ಯಾಜ್ಯ ಸಂಪನ್ಮೂಲಗಳ ನಿರ್ವಹಣಾ ಘಟಕವನ್ನು ಸ್ಥಾಪಿಸದಂತೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ರಾಯಪ್ಪ ತ್ಯಾಜ್ಯ ನಿರ್ವಹಣಾ ಘಟಕದ ಬಗ್ಗೆ ಮಾಹಿತಿ ನೀಡಿದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥ ನಾಗೇಶ್ ಭಟ್, ಗೋಮಾಳ ಜಾಗವಾಗಿರುವ ಉಳ್ಳಾಲ ಕಾಡಿನಲ್ಲಿ ಯಾವುದೇ ಕಾರಣಕ್ಕೂ ಘಟಕ ಸ್ಥಾಪಿಸಬಾರದು. ದೆಹಲಿ, ಬೆಂಗಳೂರಿನಲ್ಲಿ ಘನತ್ಯಾಜ್ಯ ಸುರಿಯಲು ಗುರುತಿಸಿದ ಸ್ಥಳಗಳಲ್ಲಿ ಆದ ಅನಾಹುತಗಳನ್ನು ಕಂಡಿದ್ದೇವೆ. ಪುರಸಭೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ತ್ಯಾಜ್ಯಗಳನ್ನು ಎಲ್ಲೂರು ಗ್ರಾಮದಲ್ಲಿ ಸುರಿಯುವುದು ಬೇಡ. ಗ್ರಾಮದ ಪ್ರತಿ ಮನೆಗಳಲ್ಲಿ ಪೈಪು ಕಾಂಪೋಸ್ಟ್‍ಗೆ ಉತ್ತೇಜನ ನೀಡಿದಲ್ಲಿ ತ್ಯಾಜ್ಯ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥ ರತ್ನಾಕರ ಶೆಟ್ಟಿ ಸಲಹೆ ನೀಡಿದರು.

ಪುರಸಭೆಯ ಅಭಿವೃದ್ಧಿಗಾಗಿ ಕಸ ಇಲ್ಲಿ ಯಾಕೆ. ಬದಲಿ ವ್ಯವಸ್ಥೆ ಕಲ್ಪಿಸಿಕೊಳ್ಳಿ. ಹೆಚ್ಚು ಸರ್ಕಾರಿ ಜಮೀನು ಹೊಂದಿರುವ ಬೆಳಪು ಗ್ರಾಮ ಪಂಚಾಯಿತಿ ಎಲ್ಲದರಲ್ಲೂ ಮಾದರಿ ಎಂದು ಹೇಳಿಕೊಳ್ಳುತ್ತಿದ್ದು, ಘನತ್ಯಾಜ್ಯ ನಿರ್ವಹಣೆಯಲ್ಲಿಯೂ ಮಾದರಿ ಎಂದು ಗುರುತಿಸಲಿ. ಅದಕ್ಕಾಗಿ ಅಲ್ಲಿರುವ ಸರ್ಕಾರಿ ಜಮೀನಿನಲ್ಲಿ ಘಟಕ ಸ್ಥಾಪಿಸಿ ಎಂದು ಅವರು ಆಗ್ರಹಿಸಿದರು.

ಈ ಗ್ರಾಪಂನಲ್ಲಿ ಅದೆಷ್ಟೋ ಮಂದಿ ನಿವೇಶನ ರಹಿತರಿದ್ದಾರೆ. ಅವರಿಗೆ ಈ ಜಮೀನನ್ನು ವಿಂಗಡಿಸಿ ನೀಡಬೇಕು. ಇಲ್ಲವೆ ಗೋಮಾಳ ಜಾಗವಾಗಿರುವ ಈ ಜಮೀನಿನಲ್ಲಿ ಗೋಶಾಲೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಎಲ್ಲೂರಿಗೆ ಅಗತ್ಯವಿರುವ ಘನತ್ಯಾಜ್ಯ ನಿರ್ವಹಣಾ ಘಟಕವನ್ನೂ ಪಂಚಾಯಿತಿಯಿಂದಲೇ ನಿರ್ಮಿಸಲಾಗುವುದು. ಈಗಾಗಲೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮುಖ್ಯಾಧಿಕಾರಿಯಾಗಿ ನೀವೇ ಮಾರ್ಗದರ್ಶನ ಮಾಡುವಂತೆ ಸದಸ್ಯರು ಸಲಹೆ ನೀಡಿದರು.

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ 10 ಟನ್ ತ್ಯಾಜ್ಯ ಸಂಗ್ರಹವಾಹುತ್ತಿದೆ. ಅದರಲ್ಲಿ 5 ಟನ್ ಹಸಿಕಸ ಲಭ್ಯವಾಗುತ್ತಿದೆ. ನಮ್ಮಲ್ಲಿಯೂ ಸಾಕಷ್ಟು ಮಂದಿ ಪರಿಸರ ಪ್ರೇಮಿಗಳಿದ್ದಾರೆ. ಬೆರಳೆಣಿಕೆ ಮಂದಿ ಮಾತ್ರ ತ್ಯಾಜ್ಯ ವಿಲೇ ಮಾಡುತ್ತಾರೆ. ನಮಗೆ ನಿರ್ವಹಣೆ ಮಾಡಲು ಸಮಯವಿಲ್ಲ. ನಮ್ಮ ಪರಿಸರವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಮಧುರೆ, ಪುಣೆ, ಚೆನ್ನೈ, ಬೆಂಗಳೂರಿನಲ್ಲಿ ಮಾತ್ರ ಪ್ಲಾಸ್ಟಿಕ್ ಮರು ಬಳಕೆ ಕಾರ್ಯ ನಡೆಯುತ್ತಿದೆ. ನಾವಿರುವರೆಗೂ ಸ್ವಚ್ಛತೆ ಮಾಡುವ ಧೃಡ ನಿರ್ಧಾರ ಮಾಡಿಕೊಳ್ಳಬೇಕು. ಎಲ್ಲೂರು ಪಂಚಾಯಿತಿ ಅನುಮತಿ ನೀಡಿದಲ್ಲಿ ಮಾತ್ರ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಮುಂದಾಗುವುದಾಗಿ ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.

 ಈ ಘಟಕ ಸ್ಥಾಪನೆ ಕುರಿತು ಸೆಪ್ಟೆಂಬರ್ 18 ರಂದು ನಡೆಯುವ ವಿಶೇಷ ಗ್ರಾಮಸಭೆಯಲ್ಲಿ ಘಟಕ ವಿರೋಧಿಸಿ ನಿರ್ಣಯ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ನಮ್ಮ ಗ್ರಾಮದ ತ್ಯಾಜ್ಯವನ್ನು ನಾವೇ ವಿಲೇ ಮಾಡುವ ಘಟಕ ನಿರ್ಮಾಣಕ್ಕೆ ಪಂಚಾಯಿತಿನಿಂದ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲೂರು ಗ್ರಾಮದಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ಪುರಸಭೆಯ ಘನತ್ಯಾಜ್ಯ ನಿರ್ವಹಣಾ ಘಟಕ ವಿರೋಧದ ಗ್ರಾಮಸ್ಥರ ನಿರ್ಧಾರಕ್ಕೆ ಬದ್ದಳಿರುವುದಾಗಿ ಗ್ರಾಪಂ ಅಧ್ಯಕ್ಷೆ ವಸಂತಿ ಮಧ್ವರಾಜ್ ಸ್ಪಷ್ಟಪಡಿಸಿದರು.

ಜಿಪಂ ಸದಸ್ಯೆ ಶಿಲ್ಪಾ ಜಿ ಸುವರ್ಣ, ಗ್ರಾಪಂ ಉಪಾಧ್ಯಕ್ಷ ಜಯಂತ್ ಕುಮಾರ್, ಪಿಡಿಒ ಮಮತಾ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News