ಎಂಆರ್‌ಪಿಎಲ್ ವಿಸ್ತರಣೆಯಲ್ಲಿ ಕೆಐಎಡಿಬಿ ವಂಚನೆ ವಿರುದ್ಧ ಪ್ರತಿಭಟನೆ
ಮಂಗಳೂರು, ಸೆ.4:ಎಂಆರ್‌ಪಿಎಲ್ ಯೋಜನಾ ವಿಸ್ತರಣೆಗೆ ಸಂಬಂಧಿಸಿ ಕುತ್ತೆತ್ತೂರು, ಪೆರ್ಮುದೆ, ಮತ್ತಿತರ ಗ್ರಾಮಗಳ ಕೃಷಿ ಭೂಮಿಯನ್ನು ಸ್ವಾಧೀನತೆ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕೆಐಎಡಿಬಿ ಅಧಿಕಾರಿಗಳ ಅಕ್ರಮವನ್ನು ವಿರೋಧಿಸಿ ವಿಶೇಷ ಭೂಸ್ವಾಧೀನಾಧಿಕಾರಿಯ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಂತೃಸ್ತ ಗ್ರಾಮಸ್ತರು ಪ್ರತಿಭಟನೆ ನಡೆಸಿದರು.
ಸ್ವಾಧೀನತೆಯ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ಕಂಡು ಬಂದಿದೆ, ತನಿಖೆ ನಡೆಸುತ್ತೇವೆ ಎಂದು ದ.ಕ.ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರು ಆಶ್ವಾಸನೆಯನ್ನು ನೀಡಿದ್ದಾರೆ. ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗೆ ಪೂರಕ ದಾಖಲೆಗಳನ್ನು ಸಲ್ಲಿಸಿದ್ದರೂ ಯಾವುದೇ ತನಿಖೆ ನಡೆದಿಲ್ಲ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಅವರು ಕಾನೂನು ಪ್ರಕಾರ ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಮೌಖಿಕ ಆದೇಶ ನೀಡಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಸುವಲ್ಲಿ ಜಿಲ್ಲಾಡಳಿತವು ನಿರಾಸಕ್ತಿಯನ್ನು ತೋರಿಸುತ್ತಿದೆ. ಭ್ರಷ್ಟ ಕೆಐಎಡಿಬಿ ಅಧಿಕಾರಿಗಳ ಪರವಾಗಿ ನಿಲುವು ತಳೆದಂತೆ ಕಂಡು ಬರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪೆರ್ಮುದೆ, ಕುತ್ತೆತ್ತೂರು ಮತ್ತಿತರ ಗ್ರಾಮಗಳ ಭೂಮಿಯು ಮೂರು ಬೆಳೆ ಬೆಳೆಯುವಷ್ಟು ಫಲವತ್ತಾಗಿದ್ದರೂ ಅದನ್ನು ಒಣ ಭೂಮಿ ಎಂದು ಎಂಆರ್‌ಪಿಎಲ್ ಸಲ್ಲಿಸಿದ ಸುಳ್ಳು ಅರ್ಜಿಯನ್ನು ಒಪ್ಪಿಕೊಂಡು ರೈತರನ್ನು ವಂಚಿಸಲಾಗಿದೆ. ಇದು ಕೃಷಿಯೋಗ್ಯ ಭೂಮಿ ಎಂಬುದಕ್ಕೆ ಇಲ್ಲಿ ನಡೆಯುತ್ತಿದ್ದ ಕೃಷಿಯೇ ಸಾಕ್ಷಿಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ಗೆ ಪ್ರತಿಭಟನಾಕಾರರು ತಿಳಿಸಿದರು.
ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಮಧುಕರ ಅಮೀನ್, ವಿಲಿಯಂ ಡಿಸೋಜ, ಹೇಮಲತಾ ಎಸ್. ಭಟ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.