ಹುಡುಗಿಯರನ್ನು ಅಪಹರಿಸಿ ನಿಮಗೊಪ್ಪಿಸುತ್ತೇನೆ: ಬೆಂಬಲಿಗರೆದುರು ಬಿಜೆಪಿ ಶಾಸಕನ ಬಡಾಯಿ

Update: 2018-09-04 16:13 GMT

ಹೊಸದಿಲ್ಲಿ, ಸೆ.4: ‘’ಯುವಜನರಿಗೆ ಏನು ಬೇಕಾದರೂ ಮಾಡಲು ನಾನು ಸಿದ್ಧ. ಏನು ಕೆಲಸ ಆಗಬೇಕಿದ್ದರೂ ನನಗೆ ಹೇಳಿ ಮಾಡಿಕೊಡುತ್ತೇನೆ. ಹುಡುಗಿಯರು ನಿಮ್ಮ ಪ್ರೇಮನಿವೇದನೆ ತಿರಸ್ಕರಿಸಿದರೆ ಎದೆಗುಂದಬೇಡಿ, ನಾನಿದ್ದೇನೆ. ಆ ಹುಡುಗಿಯನ್ನು ಅಪಹರಣ ಮಾಡಿಯಾದರೂ ನಿಮಗೆ ತಂದೊಪ್ಪಿಸುತ್ತೇನೆ’’ ಈ ಹೇಳಿಕೆ ನೀಡಿದವರು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ಕದಮ್.

 ತನ್ನ ವಿಧಾನಸಭಾ ಕ್ಷೇತ್ರವಾದ ಘಾಟ್‌ಕೊಪರ್‌ನಲ್ಲಿ ಸೋಮವಾರ ರಾತ್ರಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ‘ದಹಿ ಹಂಡಿ’(ಮೊಸರುಕುಡಿಕೆ) ಕಾರ್ಯಕ್ರಮದಲ್ಲಿ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ರಾಮ್‌ಕದಮ್ ಆಡಿರುವ ಈ ಮಾತು ವೀಡಿಯೊ ದೃಶ್ಯಾವಳಿ ಸಹಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ, ತನ್ನ ಮೊಬೈಲ್ ನಂಬರನ್ನೂ ಶಾಸಕರು ಸಭೆಯಲ್ಲಿದ್ದವರಿಗೆ ನೀಡಿದ್ದಾರೆ.

 ಆದರೆ ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿ ಮಂಗಳವಾರ ಕದಂ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ವೀಡಿಯೊ ದೃಶ್ಯಾವಳಿ ವೈರಲ್ ಆಗಿರುವುದರಿಂದ ಎಲ್ಲೆಡೆಗಳಿಂದ ಖಂಡನೆಗಳ ಸುರಿಮಳೆಯಾಗಿದೆ.

 ಕದಂರಂತಹ ವ್ಯಕ್ತಿಗಳು ವಿಧಾನಸಭೆಯಲ್ಲಿ ಕುಳಿತುಕೊಳ್ಳುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನೆಯ ಆದಿತ್ಯ ಠಾಕ್ರೆ ಕಟುವಾಗಿ ಟೀಕಿಸಿದ್ದು, ಹುಡುಗಿಯರ ಸುರಕ್ಷತೆಗೆ ಬೆದರಿಕೆ ಒಡ್ಡಿರುವ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News