ವಿದ್ಯಾರ್ಥಿಯ ಹಾಲ್‌ ಟಿಕೆಟ್‌ನಲ್ಲಿ ಅಮಿತಾಬ್ ಬಚ್ಚನ್ ಭಾವಚಿತ್ರ !

Update: 2018-09-04 16:27 GMT

ಗೋಂಡಾ, ಸೆ. 4: ಉತ್ತರಪ್ರದೇಶದ ವಿಶ್ವವಿದ್ಯಾನಿಲಯ ಬಿಎಡ್ ವಿದ್ಯಾರ್ಥಿಯೋರ್ವನಿಗೆ ಪೂರೈಸಿದ ಹಾಲ್‌ಟಿಕೇಟ್ ನಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಫೋಟೊ ಮುದ್ರಿತವಾಗಿದೆ.

ಉತ್ತರಪ್ರದೇಶದ ಗೋಂಡಾ ಜಿಲ್ಲೆಯ ರವೀಂದ್ರ ಸಿಂಗ್ ಸಮರಕ್ ಮಹಾವಿದ್ಯಾಲಯದ ವಿದ್ಯಾರ್ಥಿ ಅಮಿತ್ ದ್ವಿವೇದಿಗೆ ಉತ್ತಪ್ರದೇಶದ ಫಾಝಿಯಾಬಾದ್‌ನಲ್ಲಿರುವ ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾನಿಲಯ ಈ ವಿಲಕ್ಷಣ ಹಾಲ್‌ ಟಿಕೇಟ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್, ‘‘ನಾನು ಎರಡು ವರ್ಷದ ಪರೀಕ್ಷೆಗೆ ಭಾವಚಿತ್ರದೊಂದಿಗೆ ಸಮರ್ಪಕವಾಗಿ ಮಾಹಿತಿ ನೀಡಿದ್ದೇನೆ. ಆದರೆ, ಗುರುತು ಪತ್ರ ಸ್ವೀಕರಿಸುವಾಗ ಅದರಲ್ಲಿ ನನ್ನ ಭಾವಚಿತ್ರದ ಬದಲು ಅಮಿತಾ ಬಚ್ಚನ್ ಅವರ ಭಾವಚಿತ್ರ ಇತ್ತು. ಹೆಚ್ಚುವರಿ ದಾಖಲೆಗಳನ್ನು ನೀಡಿದ ಬಳಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಯಿತು. ಆದರೆ, ಈಗ ನನ್ನ ಅಂಕಪಟ್ಟಿಯಲ್ಲಿ ಕೂಡ ಅಮಿತಾಬ್ ಬಚ್ಚನ್ ಚಿತ್ರ ಇರಬಹುದು ಎಂದು ನನಗೆ ಆತಂಕವಾಗುತ್ತಿದೆ’’ ಎಂದಿದ್ದಾರೆ.

ಅಮಿತ್ ಸ್ವತಃ ಅಥವಾ ಇಂಟರ್‌ನೆಟ್ ಕೆಫೆಯಲ್ಲಿ ಪರೀಕ್ಷೆಯ ಅರ್ಜಿ ತುಂಬಿಸುವಾಗ ತಪ್ಪು ಮಾಡಿರಬಹುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ. ‘‘ಅಮಿತ್ ನಮ್ಮ ಕಾಲೇಜಿನ ಉತ್ತಮ ವಿದ್ಯಾರ್ಥಿ. ಆತ ಪರೀಕ್ಷೆ ಅರ್ಜಿ ತುಂಬಿಸಿ ಸಲ್ಲಿಸಿದ್ದ. ಅರ್ಜಿ ತುಂಬಿಸುವಾಗ ಆತನಿಂದ ಅಥವಾ ಇಂಟರ್‌ನೆಟ್ ಕೆಫೆಯಲ್ಲಿ ತಪ್ಪಾಗಿರುವ ಸಾಧ್ಯತೆ ಇದೆ. ವಿಶ್ವವಿದ್ಯಾನಿಲಯದಿಂದ ತಪ್ಪಾಗಿರುವ ಸಾಧ್ಯತೆ ತುಂಬಾ ಕಡಿಮೆ’’ ಎಂದು ರವೀಂದ್ರ ಸಿಂಗ್ ಸಮರಕ್ ಮಹಾವಿದ್ಯಾಲಯದ ಹಿರಿಯ ಅಧಿಕಾರಿ ಗುರ್ಪೇಂದ್ರ ಮಿಶ್ರಾ ತಿಳಿಸಿದ್ದಾರೆ. ‘‘ಅಮಿತ್‌ಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಪ್ರಾಂಶುಪಾಲರಿಗೆ ಮಾಹಿತಿ ನೀಡಲಾಗಿದೆ. ಅಂಕಪಟ್ಟಿಯನ್ನು ಸರಿ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು’’ ಎಂದು ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News