ತುಳು ಲಿಪಿ ಕಲಿಕಾ ತರಗತಿ ಉದ್ಘಾಟನೆ

Update: 2018-09-04 17:39 GMT

ಮಂಗಳೂರು, ಸೆ.4: ತುಳು ಭಾಷೆಯ ಅಧ್ಯಯನದ ಕೊರತೆ ಹಾಗೂ ನಿರಾಸಕ್ತಿಯಿಂದಾಗಿ ತುಳು ಲಿಪಿ ಕೇವಲ ಗ್ರಂಥಗಳಲ್ಲಿಯೇ ಉಳಿದು ಹೋಗಿದೆ. ಆದರೆ,ಇದು ಪುಸ್ತಕದಲ್ಲಿಯೇ ಬಾಕಿಯಾಗದೆ ಮನೆ ಮನೆಯಲ್ಲೂ ಜಾಗೃತಿಯಾಗಬೇಕು ಎಂದು ಎಸ್‌ಡಿಎಂ ಉಜಿರೆ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಎಸ್.ಆರ್.ವಿಘ್ನರಾಜ್ ಅಭಿಪ್ರಾಯಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ‘ತುಳು ಲಿಪಿ ಕಲ್ಪುಗ’ ಯೋಜನೆಯಡಿ ಉಚಿತ ತುಳು ಲಿಪಿ ಕಲಿಕಾ ತರಗತಿ ನಡೆಸುವ ಸಲುವಾಗಿ ಅಕಾಡಮಿಯ ಸಿರಿಚಾವಡಿಯಲ್ಲಿ ಮಂಗಳವಾರ ತುಳು ಲಿಪಿ ಕಲಿಕಾ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.

ತುಳು ಲಿಪಿಯ ಬಗ್ಗೆ ಅಧ್ಯಯನಶೀಲತೆ ಹಾಗೂ ಆಸಕ್ತಿಯನ್ನು ತುಳುಭಾಷಿಗರು ಬೆಳೆಸಿಕೊಳ್ಳಬೇಕು. ತುಳು ಭಾಷೆಯ 1ಲಕ್ಷಕ್ಕಿಂತಲೂ ಹೆಚ್ಚು ಗ್ರಂಥಗಳು ವಿದೇಶದಲ್ಲಿ ಸಂರಕ್ಷಿಸಲ್ಪಟ್ಟಿದೆ. ಅದರ ಅಧ್ಯಯನ ಮಾಡುತ್ತಿರುವುದು ವಿಶೇಷ. ಆದರೆ ತುಳುನಾಡಿನಲ್ಲಿ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ನಡೆಸುವವರು ಬಹಳ ಕಡಿಮೆ ಎಂಬುದನ್ನು ತುಲನೆ ಮಾಡಿದಾಗ ಆಶ್ಚರ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ತುಳು ಲಿಪಿ ಕಲಿಕಾ ತರಗತಿ ಆರಂಭ ಅತ್ಯುತ್ತಮ ಯೋಜನೆ ಎಂದು ಡಾ. ಎಸ್.ಆರ್.ವಿಘ್ನರಾಜ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಕಾರ್ಯಕ್ರಮ ಉದ್ಘಾಟಿಸಿದರು. ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಉಪಸ್ಥಿತರಿದ್ದರು. ತುಳು ಲಿಪಿ ಶಿಕ್ಷಕ ವಿದ್ಯಾಶ್ರೀ ಎಸ್. ಸ್ವಾಗತಿಸಿದರು. ನರೇಶ್ ಸಸಿಹಿತ್ಲು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News