ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಕ್ರಮ ಜಾರಿಯಾಗಲಿ: ಯು.ಟಿ ಖಾದರ್

Update: 2018-09-04 17:41 GMT

ಮಂಗಳೂರು, ಸೆ. 4: ಜಿಲ್ಲಾ ಸಮಿತಿ, ಬ್ಲಾಕ್ ಸಮಿತಿ ಹಾಗೂ ಬೂತ್‌ಮಟ್ಟದ ಸಮಿತಿಗಳು ಕಾಂಗ್ರೆಸ್ ಪಕ್ಷದ ಜೀವಾಳವಾಗಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಯಶಸ್ವಿಯಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಸಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆ.ಹರೀಶ್ ಕುಮಾರ್ ನೇತೃತ್ವದ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಲಹೆ ಸೂಚನೆ ಪಡೆದು ಪಕ್ಷದ ಮುಂದಾಳುಗಳ ಸಹಕಾರದೊಂದಿಗೆ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. 3 ತಿಂಗಳಿಗೊಮ್ಮೆ ತಾನು ಹಾಗೂ ರಮಾನಾಥ ರೈ ಪಕ್ಷದ ಮುಂದಾಳುಗಳು ಹಾಗೂ ಕಾರ್ಯಕರ್ತರೊಂದಿಗೆ ಬ್ಲಾಕ್ ಮಟ್ಟದಲ್ಲಿ ಸಭೆ ನಡೆಸಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಶ್ರಮಿಸಲಾಗುವುದು ಎಂದರು.

ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆ ಹಾಗೂ ನಿರ್ದೇಶನ ನೀಡಿದ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ ಹಾಗೂ ಜನವಿರೋಧಿ ನೀತಿಗಳ ಬಗ್ಗೆ ಹೆಚ್ಚಿನ ಪ್ರತಿರೋಧ ತೋರ್ಪಡಿಸುವ ಮೂಲಕ ಜನಸಾಮಾನ್ಯರು ಪಡುವ ಬವಣೆಗಳೊಂದಿಗೆ ಸಕ್ರೀಯವಾಗಿ ತೊಡಗಿಸಕೊಳ್ಳಬೇಕು. ಪಕ್ಷ ಕಟ್ಟುವ ಕೆಲಸದಲ್ಲಿಯೂ ನಿರಂತರ ಶ್ರಮಿಸಬೇಕೆಂದು ಸೂಚನೆ ನೀಡಿದರು.
ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಕೆ.ಹರೀಶ್‌ಕುಮಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸದಸ್ಯರು, ಎಐಸಿಸಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News