ಸಿಡಬ್ಲ್ಯೂಸಿಗೆ ಅಗೌರವ, ಕರ್ತವ್ಯಲೋಪ ಎಸಗಿದ ಆರೋಪ: ಉಡುಪಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಅಮಾನತು

Update: 2018-09-05 14:13 GMT

ಉಡುಪಿ, ಸೆ.5: ಕರ್ತವ್ಯ ಲೋಪ ಎಸಗಿದ ಆರೋಪದಡಿ ಉಡುಪಿ ನಿಟ್ಟೂರಿನ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಹುಲಿಗೆವ್ವ ಎಸ್. ಜೋಗೇರ್ ಅವರನ್ನು ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿ ಡಾ. ಅರುಂಧತಿ ಚಂದ್ರ ಶೇಖರ್ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಹುಲಿಗೆವ್ವ ಎಸ್. ಜೋಗೇರ್ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸುವಲ್ಲಿ ವಿಳಂಬ ಧೋರಣೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟಿರುವುದು ಹಾಗೂ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರೊಂದಿಗೆ ಅಗೌರವದಿಂದ ವರ್ತಿಸಿದ್ದಲ್ಲದೆ, 2018ರ ಜು.2ರಿಂದ ಜು.31ರವರೆಗೆ ಪೂರ್ವಾನುಮತಿ ಪಡೆಯದೆ ಪ್ರಭಾರ ಅಧಿಕಾರ ಹಸ್ತಾಂತರಿಸದೇ ರಜೆಯಲ್ಲಿ ತೆರಳಿರುವುದರಿಂದ ಸಿಬ್ಬಂದಿಗಳಿಗೆ ವೇತನ ಪಾವತಿ, ನಿಲಯದ ನಿವಾಸಿಗಳಿಗೆ ಆಹಾರ ವಿತರಣೆ ಮತ್ತು ದೈನಂದಿನ ಕರ್ತವ್ಯ ಗಳಿಗೆ ಅಡಚಣೆ ಉಂಟಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಇಲಾಖೆಗೆ ವರದಿ ಸಲ್ಲಿಸಿ, ಹುಲಿಗೆವ್ವ ಜೋಗೇರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದು.
ಅದರಂತೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1957ರ ನಿಯಮ ಅನ್ವಯ ಹುಲಿಗೆವ್ವ ಎಸ್.ಜೋಗೇರ್ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ, ಈ ಕೂಡಲೇ ಜಾರಿಗೆ ಬರುವಂತೆ ಸರಕಾರಿ ಸೇವೆಯಿಂದ ಅಮಾನತುಗೊಳಿಸಿದ್ದು, ಅಮಾನತ್ತಿನ ಅವಧಿಯಲ್ಲಿ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಡಾ.ಅರುಂಧತಿ ಚಂದ್ರಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ.

ಮಕ್ಕಳ ಪ್ರಕರಣವೊಂದಕ್ಕೆ ಸಂಬಂಧಿಸಿ ಉಡುಪಿ ಮಕ್ಕಳ ಕಲ್ಯಾಣ ಸಮಿತಿ ಯೊಂದಿಗೆ ಉದ್ದಟತನದಿಂದ ವರ್ತಿಸಿದ್ದ ಹುಲಿಗವ್ವ ಎಸ್.ಜೋಗೇರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಅಸಮಾಧಾನಗೊಂಡ ಸಮಿತಿ ಅಧ್ಯಕ್ಷ ರೋನಾಲ್ಡ್ ಪುರ್ಟಾಡೋ ಹಾಗೂ ಸದಸ್ಯರಾದ ಮುರಳೀಧರ್ ಶೆಟ್ಟಿ, ನಾಗರತ್ನ, ಮೋಹನ್ ಕುಮಾರ್, ಅಖಿಲ್ ಬಿ.ಹೆಗ್ಡೆ 2017ರ ಜೂ.15ರಂದು ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಿದ ಅಧೀಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಮಿತಿಯು ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News