×
Ad

ಉಡುಪಿ: ಪರಿಸರ ನಿಯಂತ್ರಣ ಮಂಡಳಿಗೆ ಏಳು ಪ್ರಶ್ನೆಗಳು

Update: 2018-09-05 20:09 IST

ಉಡುಪಿ, ಸೆ.5: ತಾವು ಮಾಹಿತಿ ಹಕ್ಕು ಕಾನೂನಿನಡಿ ಅರ್ಜಿ ಸಲ್ಲಿಸಿ ಪಡೆದ ಉಡುಪಿ ಬೂದಿ ಮಳೆ ಕುರಿತ ಎನ್‌ಐಟಿಕೆ ತಜ್ಞರ ಪರೀಕ್ಷಾ ವರದಿಯನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ಡಾ.ಪಿ.ವಿ.ಭಂಡಾರಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ರಾಜಾರಾಂ ತಲ್ಲೂರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಏಳು ಪ್ರಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯನ್ನು ಮುಂದಿಟ್ಟರು.

ಈ ಪ್ರಶ್ನೆಗಳಿಗೆ ಸ್ಪಷ್ಟೀಕರಣವನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ನೀಡಬೇಕೆಂದು ಅವರು ಆಗ್ರಹಿಸಿದರು.

1. ಎನ್‌ಐಟಿಕೆ ತಪಾಸಣಾ ವರದಿಯಲ್ಲಿ ಬಿದ್ದಿರುವುದು ಬೂದಿ ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಇಂದಿನವರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದರ ಬಗ್ಗೆ ಏನೇನು ಕ್ರಮಕೈಗೊಂಡಿದೆ.

2. ಪರಿಸರ ಮಾಲಿನ್ಯ ಮಂಡಳಿಯನ್ನು ಉಲ್ಲೇಖಿಸಿ ಮಾಧ್ಯಮಗಳ ಒಂದು ವರ್ಗ ಬಿದ್ದಿದ್ದು ಬೂದಿ ಅಲ್ಲ ಮರಳು ಎಂದು ಸಾರ್ವಜನಿಕರ ಹಾದಿ ತಪ್ಪಿಸಿದ್ದು, ಇದನ್ನು ಯಾರು, ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳುವುದೇ?

3.ಜಿಲ್ಲಾಡಳಿಕ್ಕೆ ಎನ್‌ಐಟಿಕೆ ತಪಾಸಣಾ ವರದಿ ತಲುಪಿದೆಯೇ? ತಲುಪಿದ್ದರೆ ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದೆ?

4.ಮಾಹಿತಿ ಹಕ್ಕಿನಡಿ ಕೇಳಿದಾಗ, ಇಂಥ ಮಳೆಯ ತಪಾಸಣೆ ನಡೆಸಲು, ಮಾದರಿ ಸಂಗ್ರಹಕ್ಕೆ ತಮ್ಮಲ್ಲಿ ಯಾವುದೇ ಪ್ರಮಾಣಿತ ಕ್ರಮಗಳಿಲ್ಲ ಎಂದು ಮಂಡಳಿ ಲಿಖಿತವಾಗಿ ಹೇಳಿದೆ. ಉಡುಪಿಗೆ ಕೇವಲ 30ಕಿ.ಮೀ. ದೂರದಲ್ಲಿ ಉಷ್ಣ ವಿದ್ಯುತ್ ಸ್ಥಾವರದಂತಹಾ ಕಾರ್ಖಾನೆಗಳಿರುವಾಗ ಈ ರೀತಿ ಮುನ್ನೆಚ್ಚರಿಕೆ ಕ್ರಮದೊಂದಿಗೆ ಸನ್ನದ್ಧವಾಗಿರುವ ಅಗತ್ಯವಿಲ್ಲವೇ?

5.ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ಹರಡುವ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಚರ್ಮದ ಅಲರ್ಜಿ, ಶ್ವಾಸಕೋಶದ ಅಲರ್ಜಿಗಳಂಥ ತೊಂದರೆಗಳು ಸಾಮಾನ್ಯ ವಾಗಿದ್ದು ಈ ಬಗ್ಗೆ ಅಧ್ಯಯನ ನಡೆದಿದೆಯೇ? ಆಗದಿದ್ದರೆ ಕೂಡಲೇ ನಡೆಸುವಂತೆ ಒತ್ತಾಯಿಸುತ್ತೇವೆ.

6.ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ನಿಗಾ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಕಾರ್ಖಾನೆ ಇಲಾಖೆಗೆ ಸಲ್ಲಿಸುವ ಅಂಕಿ-ಅಂಶ, ಮಾಪಕಗಳು ವಾಸ್ತವದಷ್ಟೇ ಇರುವ ಬಗ್ಗೆ ಮಂಡಳಿ ಖುದ್ದಾಗಿ ಪರಿಶೀಲನೆ ನಡೆಸಿ ಖಚಿತಪಡಿಸಿಕೊಂಡಿವೆಯೇ?

7. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯುಪಿಸಿಎಲ್‌ಗೆ ನೀಡಿರುವ ಪರವಾನಿಗೆ ಪತ್ರದಲ್ಲಿ ಹಾಕಿರುವ ಶರತ್ತುಗಳಲ್ಲಿ ಅಕಸ್ಮಿಕವಾಗಿ ನಿಗದಿಗಿಂತ ಹೆಚ್ಚು ಪ್ರಮಾಣದ ಕಲುಷಿತ ವಸ್ತುಗಳು (ಹಾರುಬೂದಿ ಸೇರಿದಂತೆ) ವಾತಾವರಣಕ್ಕೆ ಬಿಡುಗಡೆಯಾದರೆ, ಕಾರ್ಖಾನೆ ತಕ್ಷಣವೇ ಮಂಡಳಿಗೆ ತುರ್ತು ಮಾಹಿತಿ ನೀಡಬೇಕೆಂದಿದೆ. ಇಂತಹ ಮಾಹಿತಿಯನ್ನು ಕಾರ್ಖಾನೆ ಯಾವತ್ತಾದರೂ ಮಂಡಳಿಗೆ ನೀಡಿದೆಯೇ?

ದೂರು, ಮನವಿಗೆ ಬಾರದ ಸ್ಪಂದನೆ

ಆ.3ರಂದು ಉಡುಪಿಯಲ್ಲಿ ಬೂದಿ ಮಳೆ ಸುರಿದ ದಿನದಂದೇ ರಾಜಾರಾಂ ತಲ್ಲೂರು ಅವರು ರಾಜ್ಯ ಮಾಲಿನ್ಯ ನಿಯಂತ್ರಮ ಮಂಡಳಿ, ರಾಜ್ಯ ಪರಿಸರ ಇಲಾಖೆ ಕಾರ್ಯದರ್ಶಿಗಳಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಈಮೈಲ್ ಮೂಲಕ ಮನವಿ ಸಲ್ಲಿಸಿದ್ದರೂ ಇದುವರೆಗೆ ಅದಕ್ಕೆ ಉತ್ತರ ಸಿಕ್ಕಿಲ್ಲ.
ಅನಂತರ ಈ ಬಗ್ಗೆ ಸಾರ್ವಜನಿಕ ಪಿಟಿಷನ್ ಒಂದನ್ನು ಆನ್‌ಲೈನ್‌ನಲ್ಲಿ ತಯಾರಿಸಿ 144 ಮಂದಿಯ ಸಹಿಯೊಂದಿಗೆ ಕೇಂದ್ರ ಪರಿಸರ ಇಲಾಖೆಗೆ ಕಳುಹಿಸಿದ್ದರು. ಎಲ್ಲಾ ಪತ್ರಗಳ ಪ್ರತಿಗಳನ್ನು ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಳುಹಿಸಿದ್ದರು. ಆದರೆ ಎಲ್ಲಿಂದಲೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ರಾಜಾರಾಂ ತಲ್ಲೂರು ಬೇಸರದಿಂದ ನುಡಿದರು.

ಸ್ಥಳೀಯ ಪರಿಸರ ಮಾಲಿನ್ಯ ನಿಯಂತ್ರಮ ಮಂಡಳಿ ಮಳೆಯ ಮಾದರಿಯನ್ನು ಸುರತ್ಕಲ್‌ನ ಎನ್‌ಐಟಿಕೆ ಹಾಗೂ ಮಣಿಪಾಲದ ಎಂಐಟಿ ಪ್ರಯೋಗಾಲಯ ಗಳಲ್ಲಿ ತಪಾಸಣೆಗೆ ಕಳುಹಿಸಿದ್ದರು. ಆದರೆ ಮಳೆಯಲ್ಲಿರುವುದು ಬೂದಿ ಅಲ್ಲ ಸಿಲಿಕಾ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆ ಬಳಿಕ ತಾನು ವರದಿಯ ಪ್ರತಿಗಳಿಗಾಗಿ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದೆ ಎಂದು ರಾಜಾರಾಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News