ವೃಂದಾವನಸ್ಥ ಶಿರೂರು ಸ್ವಾಮೀಜಿಯ ಆರಾಧನೋತ್ಸವ
ಉಡುಪಿ, ಸೆ.5: ವೃಂದಾವನಸ್ಥ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿಯ ಆರಾಧನೋತ್ಸವವು ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಇಂದು ಜರಗಿತು.
ಶಿರೂರು ಮಠ ಹಾಗೂ ದ್ವಂದ್ವ ಸೋದೆ ಮಠದ ವತಿಯಿಂದ ಆರಾಧನೆಗೆ ಪೂರ್ವಭಾವಿಯಾಗಿ ಶಿರೂರು ಮೂಲಮಠದಲ್ಲಿ ಮಂಗಳವಾರ ರಾತ್ರಿ ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಹೆರ್ಗ ವೇದವ್ಯಾಸ ಭಟ್ ವಿವಿಧ ಧಾರ್ಮಿಕ ಕಾಯರ್ಕ್ರಮಗಳನ್ನು ನೆರವೇರಿಸಿದರು.
ಇಂದು ಬೆಳಗ್ಗೆ ಮಠದ ಪಟ್ಟಾಭಿರಾಮ ರಾಮಚಂದ್ರ ಹಾಗೂ ಮುಖ್ಯ ಪ್ರಾಣ ದೇವರಿಗೆ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ ನಡೆಸಿ ಪ್ರಸಾದವನ್ನು ಅಗಲಿದ ಸ್ವಾಮೀಜಿ ವೃಂದಾವನಕ್ಕೆ ಸಮರ್ಪಿಸಲಾಯಿತು. ಚಿಕ್ಕಪಟ್ಟದ ದೇವರು ಮತ್ತು ಮುಖ್ಯಪ್ರಾಣ ದೇವರಿಗೆ 108 ಸಿಯಾಳಾಭೀಷೇಕ ಮಾಡಲಾಯಿತು. ಬಳಿಕ ಸ್ವಾಮೀಜಿ ವೃಂದಾವನಕ್ಕೆ ಪೂಜೆ ಸಲ್ಲಿಸಿ, ಮುಖ್ಯಪ್ರಾಣ ದೇವರಿಗೆ ರಾತ್ರಿ ವಿಶೇಷ ರಂಗಪೂಜೆ ನಡೆಯಿತು.
ಆರಾಧನೆಯ ಹಿನ್ನೆಲೆಯಲ್ಲಿ ಮೂಲಮಠವನ್ನು ಶುಚಿಗೊಳಿಸಿ, ತೋರಣ ಗಳಿಂದ ಹಾಗೂ ವೃಂದಾವನವನ್ನು ಹೂವಿನಿಂದ ಶೃಂಗರಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೃಂದಾವನ ದರ್ಶನ ಪಡೆದರು. ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಯಿತು. ಬಳಿಕ ದಕ್ಷಿಣೆ ರೂಪದಲ್ಲಿ ಶಿರೂರು ಸ್ವಾಮೀಜಿಯ ಸ್ಮರಣಾರ್ಥ ಗಿಡ ನೆಡುವ ಯೋಜನೆಗಾಗಿ ಸ್ವಾಮೀಜಿ ಮಠದಲ್ಲಿ ತಂದಿರಿಸಿದ್ದ ವಿವಿಧ ಬಗೆ ಗಿಡಗಳನ್ನು ಮತ್ತು ತನ್ನ 2010ರ ಪರ್ಯಾಯ ಸಂದರ್ಭದಲ್ಲಿ ಅನ್ನ ಪ್ರಸಾದ ವಿತರಿಸಲು ತಂದು ಉಳಿದ ಊಟದ ಬಟ್ಟಲನ್ನು ಭಕ್ತರಿೆ ವಿತರಿಸಲಾಯಿತು.
ಶಿರೂರು ಸ್ವಾಮೀಜಿಯ ಪೂರ್ವಾಶ್ರಮ ಸಹೋದರರಾದ ವಾದಿರಾಜ ಆಚಾರ್ಯ, ಲಾತವ್ಯ ಆಚಾರ್ಯ, ವೃಜನಾಥ್ ಆಚಾರ್ಯ, ಶ್ರೀನಿವಾಸ್ ಆಚಾರ್ಯ, ರಘುರಾಮ್, ಶ್ರೀಕೃಷ್ಣ ಬಲ್ಲಾಳ್, ಶ್ರೀವತ್ಸ, ದ್ವಂದ್ವ ಸೋದೆ ಮಠದ ಪ್ರಮುಖರಾದ ಮದ್ವೇಶ್ ತಂತ್ರಿ, ರತ್ನಕುಮಾರ್, ಉದಯ ಸರಳತ್ತಾಯ, ಮದುಸೂಧನ್ ಪುತ್ತುರಾಯ, ಶ್ರೀನಿವಾಸ್ ಭಟ್, ಸುದರ್ಶನ್ ಪುತ್ತುರಾಯ ಉಪಸ್ಥಿತರಿದ್ದರು.
ಶಿರೂರು ಸ್ವಾಮೀಜಿಯ ಆರಾಧನೆಯ ಅಂಗವಾಗಿ ಕೃಷ್ಣ ಮಠದಲ್ಲಿಯೂ ವಿಶೇಷ ಪೂಜೆ ನೆರವೇರಿಸಲಾಯಿತು. ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನಡೆಸಿದರು. ನಂತರ ರಾಜಾಂಗಣದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಯಿತು.
ಶಿರೂರೂ ಸ್ವಾಮೀಜಿಯ ನಿಧನದ ನಂತರ ಪೊಲೀಸರು ತನಿಖೆಗಾಗಿ ಒಂದೂವರೆ ತಿಂಗಳ ಕಾಲ ಮೂಲ ಮಠವನ್ನು ತಮ್ಮ ವಶಕ್ಕೆ ಪಡೆದುಕೊಂಡಿ ದ್ದರು. ಆ.28ರಂದು ಮಠವನ್ನು ಪೊಲೀಸರು ದ್ವಂದ ಸೋದೆ ಮಠಕ್ಕೆ ಹಸ್ತಾಂತ ರಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯ ಆರಾಧನೆ ವಿಳಂಬವಾಗಿ ನಡೆಸ ಲಾಯಿತು. ದ್ವಂದ್ವ ಸೋದೆ ಮಠ ರಚಿಸಿದ್ದ ವಿಶೇಷ ಸಮಿತಿಯ ತೀರ್ಮಾನ ದಂತೆ ಆರಾಧನೆಯನ್ನು ಇಂದು ನೆರವೇರಿಸಲಾಯಿತು.
ಸ್ವಾಮೀಜಿಯ ಆಪ್ತರಿಗೆ ಆಹ್ವಾನವಿಲ್ಲ
ಶಿರೂರು ಸ್ವಾಮೀಜಿಯ ಆಪ್ತವಲಯದಲ್ಲಿ ಕಾಣಿಸಿಕೊಂಡಿದ್ದ ಕೇಮಾರು ಶ್ರೀಈಶವಿಠಲದಾಸ ಸ್ವಾಮೀಜಿ, ಬಾರಕೂರು ಶ್ರೀಸಂತೋಷ್ ಗುರೂಜಿ, ವಜ್ರದೇಹಿ ಶ್ರೀರಾಜಾಶೇಖರಾನಂದ ಸ್ವಾಮೀಜಿ, ಒಡಿಯೂರು ಸ್ವಾಮೀಜಿ ಹಾಗೂ ಸ್ವಾಮೀಜಿಯ ಅಭಿಮಾನಿ ಬಳಗದವರಿಗೆ ಆರಾಧನಾ ಮಹೋತ್ಸವಕ್ಕೆ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ.
ಸೋದೆ ಮಠದವರು ಸ್ವಾಮೀಜಿ ಪೂರ್ವಾಶ್ರಮದ ಸಹೋದರರಿಗೆ ಗೌರವ ನೀಡಿಲ್ಲ ಎಂಬ ಆರೋಪ ಕೇಳಿಬರುತ್ತಿವೆ. ಆರಾಧನೆಯ ಕ್ರಿಯೆಯ ಕ್ರಮದ ಪ್ರಕಾರ ಶಿರೂರು ಮಠದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ವನ್ನು ಸ್ವಾಮೀಜಿಯ ವೃಂದಾವನಕ್ಕೆ ಸಮರ್ಪಿಸಬೇಕು. ಆದರೆ ಶಿರೂರು ಮಠದ ಪಟ್ಟದ ದೇವರನ್ನು ಮೂಲಮಠಕ್ಕೆ ತೆಗೆದುಕೊಂಡು ಬಂದಿಲ್ಲ. ಒಟ್ಟಾರೆ ಈ ಮಹೋತ್ಸವ ಕಾಟಾಚಾರಕ್ಕೆ ಮಾಡಿದಂತಿದೆ ಎಂದು ಸ್ವಾಮೀಜಿಯ ಭಕ್ತರು ಆರೋಪಿಸಿದ್ದಾರೆ.