ಚಿನ್ನಾಭರಣವಿದ್ದ ಹ್ಯಾಂಡ್‌ಬ್ಯಾಗ್ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2018-09-05 16:13 GMT

ಮಂಗಳೂರು, ಸೆ.5: ಚಿನ್ನಾಭರಣವಿದ್ದ ಹ್ಯಾಂಡ್‌ಬ್ಯಾಗ್‌ನ್ನು ದರೋಡೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ತೊಕ್ಕೊಟ್ಟು ಕಲ್ಲಾಪು ಸಮೀಪ ಸುರತ್ಕಲ್ ಪೊಲೀಸರು ಬಂಧಿಸಿ, ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಕುದ್ರೋಳಿ ನಿವಾಸಿ ಮುಹಮ್ಮದ್ ಸಲ್ಮಾನ್ (26) ಹಾಗೂ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೈಕಂಬ ನಿವಾಸಿ ಹುಸೈನ್ ತನ್ವೀರ್ (28) ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ದರೋಡೆ ಮಾಡಿದ್ದ 8.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಹಾಗೂ 2ನೇ ಆರೋಪಿಯಿಂದ 2.50 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 11.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆ. 26ರಂದು ಬಜ್ಪೆ ಮೂಲದ ಮಹಿಳೆಯೋರ್ವರು ಸಂಬಂಧಿಕರ ಮನೆಯಾದ ಸುರತ್ಕಲ್‌ನ ಚೊಕ್ಕಬೆಟ್ಟು ಎಂಬಲ್ಲಿಗೆ ತೆರಳಿದ್ದಾರೆ. ನಂತರ ಮನೆಗೆ ವಾಪಸಾಗುವಾಗ ಸುರತ್ಕಲ್‌ನ ಮುಕ್ಕ ಮಲ್ಲಮಾರ್ ಬೀಚಿಗೆ ಹೋಗಲು ತೀರ್ಮಾನಿಸಿದ್ದಾರೆ. ತಾನು ಧರಿಸಿದ್ದ ಚಿನ್ನಾಭರಣಗಳನ್ನು ಹ್ಯಾಂಡ್ ಬ್ಯಾಂಗ್‌ನಲ್ಲಿ ಹಾಕಿ ಬೀಚಿಗೆ ಹೋಗಿದ್ದಾರೆ.

ಈ ವೇಳೆ ಆರೋಪಿಗಳಾದ ಸಲ್ಮಾನ್ ಮತ್ತು ತನ್ವೀರ್ ಎಂಬವರು ಮಹಿಳೆ ಬೀಚ್‌ನಲ್ಲಿದ್ದುದನ್ನು ಗಮನಿಸಿ, ಮಹಿಳೆಯ ಹಿಂದಿನಿಂದ ಬಂದು ಹ್ಯಾಂಡ್‌ಬ್ಯಾಗ್‌ನ್ನು ಎಳೆದುಕೊಂಡು ದರೋಡೆಗೈದು ಪರಾರಿಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ.ಜಿ. ಹಾಗೂ ಠಾಣಾ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News